ನವದೆಹಲಿ, ಡಿ8 : ಪೌರತ್ವ ಪರಿಷ್ಕೃತ ತಿದ್ದುಪಡಿ ಮಸೂದೆ 2019 ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿರುವ ಮಸೂದೆಯ ಮೇಲೆ ಎಲ್ಲರ ಗಮನ ದೃಷ್ಟಿ ನೆಟ್ಟಿದೆ. ಮೂಲಗಳ ಪ್ರಕಾರ, ಪರಿಷ್ಕೃತ ಕರಡು ಕಾನೂನನ್ನು ಪ್ರಶ್ನೋತ್ತರ ಅವಧಿ ಮುಗಿದ ನಂತರ ಸಚಿವರು ಇದನ್ನೂ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ. ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಮಸೂದೆ ಅವಕಾಶ ಮಾಡಿಕೊಡಲಿದೆ. ಕರಡು ಕಾನೂನನ್ನು ಪ್ರಭಾವಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ಯು), ವಿರೋಧ ಪಕ್ಷಗಳು ಮತ್ತು ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿನ ಇತರ ಪಾಲುದಾರ ಪಕ್ಷದ ನಾಯಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈಶಾನ್ಯದ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳ ತೀವ್ರ ಪ್ರತಿಭಟನೆಯ ಮಧ್ಯೆ, ಹೊಸ ಕರಡು ಮಸೂದೆ ಪಾಲುದಾರರ ಪಕ್ಷಗಳ ಹಿತಾಸಕ್ತಿ, ಮತ್ತು 'ಭಾರತದ ಹಿತಾಸಕ್ತಿಯನ್ನು ರಕ್ಷಣೆ ಮಾಡಲಿದೆ ಕೇಂದ್ರ ಸರ್ಕಾ ರ ಸ್ಪಷ್ಟಪಡಿಸಿದೆ. ಇದು ಸಮಗ್ರ ದೇಶದ ಹಿತಾಸಕ್ತಿ ಕಾಪಾಡಲಿದೆ ಈಗಾಗಲೇ ಕೆಂದ್ರ ಸಚಿವ ಸಂಪುಟ ಸಹ ಇದಕ್ಕೆ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು. ಇದೆ 13ಕ್ಕೆ ಸಂಸತ್ ಅಧಿವೇಶನ ಕೊನೆಯಾಗಲಿದೆ.