ಧಾರವಾಡ 12: ಜಿಲ್ಲೆಯ ಗಡಿಭಾಗವಾದ ಕಲಘಟಗಿ ತಾಲೂಕಿನ ಪುಟ್ಟಗ್ರಾಮ ಲಿಂಗನಕೊಪ್ಪದ ನಿವೃತ್ತ ಸೈನಿಕ ಮಹದೇವ ಸಂಕಪ್ಪ ಅಡಕಿ ಅವರಿಗೆ ನಮ್ಮ ಗ್ರಾಮದಲ್ಲಿ ಅಭಿನಂದಿಸುತ್ತಿರುವುದು ಹೆಮ್ಮೆಯ ಸಂಗತಿ ಮತ್ತು ಇಡೀ ದೇಶಕ್ಕೆ ಮಾದರಿಯಾಗುವಂತೆ ಸೇವೆ ಸಲ್ಲಿಸಿ ಈ ಪುಟ್ಟ ಗ್ರಾಮದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರ ಪಡಿಸಿದ್ದು ಸಂತೋಷದ ವಿಷಯ ಎಂದು ಎಸ್ಡಿಎಮ್ಸಿ ಅಧ್ಯಕ್ಷ ಮಂಜುನಾಥ ಬಡಿಗೇರ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲಿಂಗನಕೊಪ್ಪ ಮತ್ತು ಲಿಂಗನಕೊಪ್ಪ ಗ್ರಾಮದ ಹಿರಿಯರು ಸೇರಿ ಹಮ್ಮಿಕೊಂಡ ಸೈನಿಕನಿಗೆ ಅಭಿನಂಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಯುವಕರು ಮತ್ತು ಮಕ್ಕಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾಡಿಗೆ ಸೇವೆ ಸಲ್ಲಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಅತಿಥಿಗಳಾದ ಹಿರಿಯ ವಕೀಲರಾದ ನಾಗರಾಜ ಕಲ್ಲೂರ ಮಾತನಾಡಿ ವೃತ್ತಿಯೊಂದಿಗೆ ಸೇವಾ ಮನೋಭಾವದಿಂದ ಬದುಕಿದರೆ ಸಮಾಜದ ಏಳಿಗೆಯಾಗುತ್ತದೆ ಮತ್ತು ಎಲ್ಲರಲ್ಲೂ ಸಹ ಸಹಭಾಳ್ವೆಯ ಸಂಬಂಧಗಳು ಹೆಚ್ಚಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮಹದೇವ ಸಂಕಪ್ಪ ಅಡಕಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ದೇಶ ಸೇವೆಯಲ್ಲಿ ಸಿಗುವ ಸಂತೋಷ ಮತ್ತೆ ಬೇರೆಯಲ್ಲೂ ಸಿಗುವುದಿಲ್ಲ ಅಂತಹ ಭಾಗ್ಯ ನನಗೆ ದೊರೆತ್ತಿದ್ದು ಹೆಮ್ಮೆಯ ವಿಷಯ. ನಮ್ಮ ಊರಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಭಾಗವಹಿಸಿ ಮತ್ತು ಶಿಕ್ಷಣದಲ್ಲಿ ಚೆನ್ನಾಗಿ ಓದಿ ನಮ್ಮ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಗ್ರಾಮದ ಹಿರಿಯರಾದ ಫಕ್ಕೀರಪ್ಪ ದಾಸ್ತಿಕೊಪ್ಪ, ಬಸವರಾಜ ನೇಸರಗಿ, ಶಿವಲಿಂಗಯ್ಯ ಹಿರೇಮಠ, ಹಿರೇಮಠ ವಕೀಲರು, ಶಂಭುಲಿಂಗ ಹೊಸಮನಿ, ಮಡಿವಾಳಯ್ಯ ಹಿರೇಮಠ, ಗುರುಬಸಯ್ಯ ಹಿರೇಮಠ, ಮಲ್ಲಿಕಾರ್ಜುನ ಹದ್ದಣ್ಣವರ, ಮಾಳೇಶ ಕರಡಿಗುಡ್ಡ, ಫಕ್ರುಸಾಭ ಮುಲ್ಲಾನವರ, ಯಲ್ಲಪ್ಪ ಶಿಂಧೆ ಹಾಗೂ ಊರಿನ ಗಣ್ಯರು ಹಾಜರಿದ್ದರು.
ಶಾಲೆಯ ಶಿಕ್ಷಕರಾದ ಎಸ್.ಪಿ.ಹೆಗಡೆ ನಿರೂಪಿಸಿದರು. ಎಸ್.ಕೆ ಹವಳೆ ಸ್ವಾಗತಿಸಿದರು. ಸಿ.ಎಮ್ ಉಡಕೇರಿ ವಂದಿಸಿದರು. ಶಾಲಾ ಮಕ್ಕಳು ರಾಷ್ಟ್ರಗೀತೆಗಳ ಮೂಲಕ ಮನರಂಜನೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ವೃಂದ, ಮಕ್ಕಳು, ಊರಿನ ನಾಗರಿಕರು ಹಾಜರಿದ್ದರು.