ಬಿಜೆಪಿ ಕಚೇರಿಗೆ ಲಿಂಗಾಯತರಿಗೆ ನಿರ್ಬಂಧ: ಯಡಿಯೂರಪ್ಪಗೆ ಸೂಕ್ಷ್ಮವಾಗಿ ತಿವಿದ ಎಂ.ಬಿ.ಪಾಟೀಲ್

ಬೆಂಗಳೂರು,  ಅ 15:     ಲಿಂಗಾಯತರಾಗಲೀ ಅಥವ ಇನ್ಯಾವುದೇ ಸಮುದಾಯದವರಾಗಲೀ ಕಚೇರಿಗೆ ಬರಬೇಡಿ  ಎಂದು ಹೇಳುವುದು ಸರಿಯಲ್ಲ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ  ಎಂ.ಬಿ.ಪಾಟೀಲ್  ಟೀಕಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿದ್ದಾರೆ.

 ಬಿಜೆಪಿ ಕಚೇರಿಗೆ ಲಿಂಗಾಯತ  ಸಮುದಾಯದ ಕಾರ್ಯಕರ್ತರ ಪ್ರವೇಶ ನಿರ್ಬಂಧ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ  ಅವರು, ಲಿಂಗಾಯತ ಕಾರ್ಯಕರ್ತರಿಗೆ ಬಿಜೆಪಿ ಕಚೇರಿ ಪ್ರವೇಶ ನಿಷಿದ್ಧ ವಿಚಾರ ತಮಗೆ  ಮಾಧ್ಯಮಗಳ ಮೂಲಕ ತಿಳಿದುಬಂದಿದ್ದು,ಇದು ಎಷ್ಟರಮಟ್ಟಿಗೆ ಸರಿ ಎಂಬುದು ತಮ್ಮ ಗಮನಕ್ಕೆ  ಇನ್ನೂ ಬಂದಿಲ್ಲ. ಒಂದುವೇಳೆ ಇದು ಸತ್ಯ ಆಗಿದ್ದರೆ ಈ ಕ್ರಮ ದುರದೃಷ್ಟಕರ.ಈ ಬಗ್ಗೆ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಹಳ ಗಂಭೀರವಾಗಿ ವಿಚಾರ ಮಾಡಬೇಕಾಗುತ್ತದೆ.ಯಾವುದೇ  ಸಮುದಾಯದವರನ್ನು  ಬರಬೇಡಿ ಎಂದು ಹೇಳುವುದು  ತಪ್ಪು ಎನ್ನುವ ಮೂಲಕ ಯಡಿಯೂರಪ್ಪರನ್ನು  ಸೂಕ್ಷ್ಮವಾಗಿ ತಿವಿದರು. 

ಲಿಂಗಾಯತರ ಬೆಂಬಲ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ  ಸಿಕ್ಕಿದೆ. ಆದರೂ ಸಮುದಾಯಕ್ಕೆ ಈ ರೀತಿ ಅಪಮಾನ ಮಾಡಿರುವುದು ಸರಿಯಲ್ಲ. ಈ ಬಗ್ಗೆ   ಯಡಿಯೂರಪ್ಪ ಆದಿಯಾಗಿ ಎಲ್ಲರೂ ವಿಚಾರ ಮಾಡಬೇಕು ಎಂದರು. 

 ಬಿಜೆಪಿಯಲ್ಲಿ  ಯಡಿಯೂರಪ್ಪ ನಿರ್ಲಕ್ಷ್ಯ ವಿಚಾರ  ಅದು ಅವರ ಪಕ್ಷದ ಆಂತರಿಕ ವಿಚಾರ. ಆ ಬಗ್ಗೆ ಯಡಿಯೂರಪ್ಪ ಅವರೇ ಹೇಳಬೇಕೇ ಹೊರತು ತಾವು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು. 

ರಾಜ್ಯ  ಬಿಜೆಪಿ ಕಚೇರಿಯಲ್ಲಿ ಲಿಂಗಾಯತ ಕಾರ್ಯಕರ್ತರನ್ನು ಗುರಿಯಾಗಿಸಿ ಅವರ ಪ್ರವೇಶ  ನಿರಾಕರಿಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಬಿ.ಎಸ್. ಯಡಿಯೂರಪ್ಪ ಬೆಂಬಲಿಗ  ನಂಜುಂಡಸ್ವಾಮಿ ಎಂಬುವವರು ಗಂಭೀರ ಆರೋಪ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಕಳೆದ  ಹದಿನಾಲ್ಕು ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದೇನೆ. ಬಿಜೆಪಿ ಹೆತ್ತ ತಾಯಿ ಎಂದು  ತಿಳಿದುಕೊಂಡಿದ್ದೆ. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಲಕ್ಷಾಂತರ ಜನ ಬಿಜೆಪಿ  ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಅವರನ್ನು ಕೆಳಗಿಳಿಸಿ ಹೊಸ  ಅಧ್ಯಕ್ಷರು ಬಂದ ಮೇಲೆ ಲಿಂಗಾಯತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ  ವ್ಯಕ್ತಪಡಿಸಿದ್ದಾರೆ. 

ಹತ್ತಾರು ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ಕೆಲಸ  ಮಾಡುತ್ತಿದ್ದ ಐದಾರು ಲಿಂಗಾಯತ ಸಮುದಾಯದ ಕಾರ್ಯಕರ್ತರನ್ನು ಕೆಲಸದಿಂದ ತೆಗೆಯಲಾಗಿದೆ.  ಲಿಂಗಾಯತ ಕಾರ್ಯಕರ್ತರನ್ನು ಕಚೇರಿಗೆ ಬರಬೇಡಿ ಎಂದು ಹೇಳಲಾಗುತ್ತಿದೆ ಎಂಬ ಬಗ್ಗೆ ಇದೀಗ  ಆಕ್ರೋಶ ವ್ಯಕ್ತವಾಗಿದೆ.