ಕಾನೂನನ್ನು ಗೌರವಿಸಿ ಕರ್ತವ್ಯಗಳತ್ತ ಗಮನ ಕೊಡಿ: ಅರಳಿ ನಾಗರಾಜ

Respect law and pay attention to duties: Arali Nagaraja

ಶಿಗ್ಗಾವಿ  04: ಕಾನೂನನ್ನು ಗೌರವಿಸುವ ಮೂಲಕ ನಾವು ನಮ್ಮ ಕರ್ತವ್ಯಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು, ವಿಶ್ವಾಸದೊಂದಿಗೆ, ಹಿರಿಯರ ಸನ್ಮಾರ್ಗದಲ್ಲಿ ನಡೆದರೆ ವೃತ್ತಿಜೀವನ ಯಶಸ್ವಿಯಾಗಲು ಸಾಧ್ಯ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜರವರು ಹೇಳಿದರು.  

ಪಟ್ಟಣದ ತಾಲೂಕ ನ್ಯಾಯವಾದಿಗಳ ಸಂಘದಿಂದ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದ ಅವರು ಮನುಷ್ಯ ತನ್ನ ಜೀವನದಲ್ಲಿ ತಪ್ಪು ಪಡುವದು ಸಹಜ. ತಪ್ಪುಗಳು ಗೊತ್ತಿದ್ದರೂ ಪದೇ ಪದೇ ಪುನರಾವರ್ತನೆಗೊಳಿಸದೆ, ಮಾಡಿದ ತಪ್ಪನ್ನು ಪರಿವರ್ತನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಅಂದಾಗ ಮಾತ್ರ ವೃತ್ತಿ ಜೀವನ  ಸಾರ್ತಕವಾಗಬಲ್ಲದು ಎಂದರು. 

ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಬೇಕಾದರೆ, ಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಕನ್ನಡ ಭಾಷೆಗೆ ಹೆಚ್ಚಿನ ಗೌರವವನ್ನು ಕೊಡುವ ಕೆಲಸವಾಗಬೇಕು. ಕರ್ತವ್ಯದ ಜೊತೆಗೆ ನಾಡು ನುಡಿ ನಮ್ಮ ಧರ್ಮ ರಕ್ಷಣೆಯು ಬಹಳ ಪ್ರಾಮುಖ್ಯವಾಗಿದ್ದು ಇಂದಿನ ಯುವ ವಕೀಲರು ವೈಯಕ್ತಿಕ ವಿಷಯಗಳನ್ನು ವೃತ್ತಿಯಲ್ಲಿ ಬಳಸದೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದಿಂದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜರವನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ವಕೀಲಿ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಎಸ್ ಕೆ ಜೋಶಿ ಹಾಗೂ ಎಮ್ ಎನ್ ಕ್ಯಾಲಕೊಂಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವಕೀಲರಾದ ಎಫ್ ಎಸ್ ಕೋಣನವರ, ಜಿ ಐ ಸಜ್ಜನರ ಪ್ರಸ್ತಾವಿಕವಾಗಿ ಮಾತನಾಡಿದರು. 

 ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸುನಿಲ ಎಸ್ ತಳವಾರ,  ದಿವಾಣಿ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಫ್‌. ಬಿ. ಗಂಜಿಗಟ್ಟಿ, ಆರ್‌. ಯು. ಕುಬಸದ, ಸರ್ಕಾರಿ ಅಭಿಯೋಜಕ ಎನ್‌. ಎಂ. ಮಲ್ಲಾಡದ ಹಾಗೂ ಮೀರಾಬಾಯಿ ಉದಗಟ್ಟಿ ಸೇರಿದಂತೆ ಹಿರಿಯ ಹಾಗೂ ಹಿರಿಯ ಮಹಿಳಾ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಂಜಿ ವಿಜಾಪುರ ಸ್ವಾಗತಿಸಿ. ಬಿಪಿ ಗುಂಡಣ್ಣನವರ ನಿರೂಪಿಸಿ ಜಿಬಿ ವಾಲ್ಮೀಕಿ ವಂದಿಸಿದರು.