ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡದಿದ್ದರೆ ಜಿಲ್ಲಾ ಪಂಚಾಯತ ಸದಸ್ಯತ್ವಕ್ಕೆ ರಾಜೀನಾಮೆ

ಬೈಲಹೊಂಗಲ 04: ಉಪವಿಭಾಗ ಕೇಂದ್ರವಾದ ಬೈಲಹೊಂಗಲವನ್ನು ಜಿಲ್ಲೆಯಾಗಿ ಘೋಷಣೆ ಮಾಡದಿದ್ದರೆ ಜಿಲ್ಲಾ ಪಂಚಾಯತ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಜಿ.ಪಂ.ಸದಸ್ಯ ಶಂಕರ ಮಾಡಲಗಿ ಹೇಳಿದರು.

  ಅವರು ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಪೂರ್ವಕ್ಕಿಂತ ಬೈಲಹೊಂಗಲ ನಾಡಿನ ಕೊಡುಗೆ ಅಪಾರವಾಗಿದೆ. ವೀರಮಾತೆ ಕಿತ್ತೂರ ಚನ್ನಮ್ಮಾ, ಬೆಳವಡಿ  ಮಲ್ಲಮ್ಮ, ಸಂಗೋಳ್ಳಿ ರಾಯಣ್ಣ, ಅಮಟೂರ ಬಾಳಪ್ಪರಂತಹ ವೀರರ ಪುಣ್ಯ ಭೂಮಿ ಇದಾಗಿದೆ.

      ನಿನ್ನೆ ಮುಖ್ಯಮಂತ್ರಿಯವರಿಗೆ ಗೋಕಾಕ ಜಿಲ್ಲೆ ಮಾಡುವಂತೆ ಒತ್ತಾಯಿಸಿದ್ದು ಅಲ್ಲದೆ ಬಿಜೆಪಿ ಸರಕಾರ ಬರಲಿಕೆ ನಮ್ಮ ಗೋಕಾಕವೇ ಕಾರಣವೆಂದು ಹೇಳಿಕೆ ನೀಡಿರುವುದು ಮತ್ತು ಹಿಂದಿನ ಸರಕಾರ ಕೆಡುವಲ್ಲಿ ನಾವೇ ಕಾರಣರೆಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿರುವುದು ಕರ್ನಾಟಕಕ್ಕೆ ಮಾಡಿರುವ ಅನ್ಯಾಯ.ಚಿಕ್ಕೋಡಿ ಜಿಲ್ಲೆಯನ್ನು ಮಾಡಬೇಕೆಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಇದೇ ರೀತಿ ಮುಖ್ಯಮಂತ್ರಿಯವರಿಗೆ ಒತ್ತಡ ಹೇರಲಾಗಿದ್ದು ಈ ಜಿಲ್ಲೆಯ ದುರ್ದೈವ ಸಂಗತಿ. ಆದ ಕಾರಣ ಬೈಲಹೊಂಗಲ ಜಿಲ್ಲೆಯನ್ನು ಮಾಡಲಿಕೆ 30 ವರ್ಷದಿಂದ ಸರಕಾರದ ಎಲ್ಲ ಸಮಿತಿಯಲ್ಲಿ ಶಿಪ್ಪಾರಸ್ಸು ಮಾಡಲಾಗಿದೆ. ಬೈಲಹೊಂಗಲವನ್ನು ಜಿಲ್ಲೆಯಾಗಿ ಘೋಷಣೆ ಮಾಡಬೇಕು. ಜಿಲ್ಲೆ ಮಾಡಲಿಕೆ ಅಸಹಕಾರ ತೋರಿದರೆ ಬೈಲಹೊಂಗಲ ಜಿಲ್ಲೆ ಮಾಡಲಿಕೆ ಕಿತ್ತೂರು, ಸವದತ್ತಿ, ಯರಗಟ್ಟಿ, ರಾಮದುರ್ಗ ಎಲ್ಲ ಜನರೊಂದಿಗೆ ಪಟ್ಟಣದ ಮೂರುಸಾವಿರಮಠದಲ್ಲಿ  ಸಭೆ ಸೇರಿ ಎಲ್ಲ ಹಿರಿಯರ ಅಭಿಪ್ರಾಯ ಸಂಗ್ರಹಿಸಿ ಬಂದ್ ಮಾಡುವ ದಿನಾಂಕವನ್ನು ನಿಗದಿಪಡಿಸಲಾಗವುದು ಎಂದು ತಿಳಿಸಿದರು. ಜಿಲ್ಲೆ ಘೋಷಣೆ ಮಾಡಲು ಜಿಲ್ಲಾ ಪಂಚಾಯತ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ತಮ್ಮ ನಿರ್ಧಾರ ವ್ಯಕ್ತಪಡಿಸಿದರು.