ನವದೆಹಲಿ, ಫೆ 10 : ಪರಿಶಿಷ್ಟ ಜಾತಿ, ವರ್ಗಗಳ ಉದ್ಯೋಗ ಮತ್ತು ಬಡ್ತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಮೇಲ್ಮನವಿ ಸಲ್ಲಿಸಬೇಕು ಎಂದು ಲೋಕಜನಶಕ್ತಿ ಮುಖಂಡ, ಸಂಸದ ಚಿರಾಗ್ ಪಾಸ್ವಾನ್ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಪಾಲ್ಗೊಂಡ ಅವರು ಈ ತೀರ್ಪಿಗೆ ಪಕ್ಷದ ಸಹಮತ ಇಲ್ಲ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದರು.
ಇದಕ್ಕೆ ಅನೇಕ ವಿರೋಧಿ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಸರ್ಕಾರ ಹಿಂದುಳಿದವರು, ಪರಿಶಿಷ್ಟರ ವಿಚಾರದಲ್ಲಿ ತಾರತಮ್ಯ, ಮೌನವಹಿಸುವುದು ತರವಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ನೇತೃತ್ವದ ಎನ್ ಡಿಎ ಅಂಗಪಕ್ಷವಾಗಿರುವ ಅಪ್ನಾ ದಳ್ ಸಂಸದೆ ಅನುಪ್ರಿಯ ಪಟೇಲ್ ಇದಕ್ಕೆ ಸಹಮತ ವ್ಯಕ್ತಪಡಿಸಿ ಪರಿಶಿಷ್ಟರ ವಿಚಾರದಲ್ಲಿ ಸುಪ್ರಿಂಕೋರ್ಟ್ ಇಂತಹ ತೀರ್ಪು ನೀಡಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ನೋವಿನ ಸಂಗತಿ ಎಂದು ವಿಷಾದಿಸಿದರು.