ಮೀಸಲಾತಿ ರದ್ದು ಬಿಜೆಪಿಗರ ಹಿಡನ್ ಅಜೆಂಡಾ: ಯು.ಟಿ.ಖಾದರ್

ಹಾಸನ, ಫೆ. 8, ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಪರೋಕ್ಷವಾಗಿ ರದ್ದು ಮಾಡುವುದು ಬಿಜೆಪಿಗರ ಹಿಡನ್ ಅಜೆಂಡಾ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿಯಲ್ಲಿ ಸಿಕ್ಕ ಮೀಸಲಾತಿಯನ್ನು ರದ್ದು ಮಾಡುವುದು ಇವರ ಹುನ್ನಾರ. ಮೀಸಲಾತಿ ತೆಗೆಯಲೆಂದೇ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ನೇರವಾಗಿ ಮೀಸಲಾತಿ ರದ್ದುಮಾಡಲು ಆಗುವುದಿಲ್ಲ. ಅದಕ್ಕಾಗಿ ಎಲ್ಲಾ ಸಂಸ್ಥೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದೇಶಕ್ಕೆ ಒಂದೇ ಒಂದು ಹೊಸ ವಿಶ್ವವಿದ್ಯಾಲಯ ಕೊಟ್ಟಿಲ್ಲ. ಕೊಟ್ಟಿದ್ದು ಮಾತ್ರ ವಾಟ್ಸಪ್ ಯುನಿವರ್ಸಿಟಿ   ಎಂದು ವ್ಯಂಗ್ಯವಾಡಿದರು ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ವೈರಿ ರಾಜ್ಯದಂತೆ ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ  ಬಿಜೆಪಿ ಬಂದರೆ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದರು. ರಾಜ್ಯದಿಂದ 28 ಸಂಸದರು ಕೇಂದ್ರಕ್ಕೆ ಆರಿಸಿ ಹೋಗಿದ್ದರೂ ಮಹಾದಾಯಿ, ನೆರೆ ಬಂದ ವೇಳೆ ಪ್ರಧಾನಿ ನೆರವಿಗೆ ಬರಲಿಲ್ಲ. ಬಜೆಟ್ ನಲ್ಲಿಯೂ ನಮ್ಮ ರಾಜ್ಯಕ್ಕೂ ಏನೂ ಬರಲಿಲ್ಲ. ಉಪ ನಗರ ರೈಲ್ವೆಗೆ ಕೇವಲ ಒಂದು ಕೋಟಿ ಮೀಸಲಿಟ್ಟಿದ್ದಾರೆ. ಮೂವರು ಸಚಿವರು, 25 ಸಂಸದರು, ರಾಜ್ಯಾಧ್ಯಕ್ಷರ ಸಾಮರ್ಥ್ಯ ಕೇವಲ ಒಂದು ಕೋಟಿ ಮಾತ್ರವೇ. ಇವರಿಗೆಲ್ಲ ಪ್ರಧಾನಿ ಮೋದಿಯ ಮುಂದೆ ಮಾತನಾಡಲು ಇವರಿಗೆ ಭಯವಾಗುತ್ತದೆ. ಪ್ರತಿಯೊಂದಕ್ಕೂ ಗಾಂಧಿ ಪ್ರತಿಮೆಯ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿಗರು ರಾಜ್ಯಕ್ಕೆ ಅನ್ಯಾಯವಾಗಿರುವಾಗ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗಿಯವರಿಗೆ ನೀಡುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಕಡಿಮೆ ಬೆಲೆಗೆ ಖಾಸಗಿಯವರಿಗೆ ನೀಡುತ್ತಿದ್ದಾರೆ. ಎಲ್ ಐ ಸಿ ಯ ಷೇರನ್ನು ಮಾರಾಟ ಮಾರಲು ಹೊರಟಿದ್ದಾರೆ. ಮನೆಯಲ್ಲಿ ಕಷ್ಟ ಬಂದಾಗ ಮಾಂಗಲ್ಯವನ್ನು ಸಹ ಅಡಮಾನ ಇಡುವುದಿಲ್ಲ. ಅದೇ ರೀತಿ ಎಲ್ ಐ ಸಿ ಯ ಷೇರನ್ನು ಮಾರಲು ಹೊರಟಿದ್ದಾರೆ. ಇದು ಯಾವ ರೀತಿಯ ದೇಶ ಪ್ರೇಮ ಎಂದು ಪ್ರಶ್ನಿಸಿದರು.? ಯುವಕರು ಹಾಗೂ ವಿದ್ಯಾರ್ಥಿಗಳು ಇದರ ಬಗ್ಗೆ ಅಧ್ಯಯನ ಮಾಡಬೇಕಿದೆ. ದೇಶದ ರಕ್ಷಣೆಗೆ ಯುವಕರು ಹಾಗೂ ವಿದ್ಯಾರ್ಥಿಗಳು ಬೀದಿಗಿಳಿಯಬೇಕಾಗಿದೆ. ಇಲ್ಲದಿದ್ದರೆ ನಮ್ಮ ದೇಶ ದಿವಾಳಿಯಾಗುತ್ತದೆ ಎಂದು ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದರು.