ಬೆಳಗಾವಿ, ಜ 10 ಮೀಸಲಾತಿ ಸಂವಿಧಾನಿಕ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಆಗಿದ್ದು, ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಪ್ರತಿಪಾದಿಸಿದ್ದಾರೆ.
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮೀಸಲಾತಿ ಪರಿಷ್ಕರಿಸುವ ಕುರಿತು ನಗರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಉದ್ಯೋಗಗಳು ಖಾಲಿ ಇವೆ. ಜತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಬಂಡವಾಳ ಹಿಂದಕ್ಕೆ ಪಡೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲಾತಿ ಅನುಷ್ಠಾನ ಸಾಧ್ಯವಿಲ್ಲ ಎಂದರು.
ಮೀಸಲಾತಿ ಬಗ್ಗೆ ಯುವ ಸಮುದಾಯದಲ್ಲಿ ವಿರೋಧದ ಭಾವನೆ ವ್ಯಕ್ತವಾಗುತ್ತಿದೆ. ಹತ್ತು ವರ್ಷ ಮೀಸಲಾತಿ ನೀಡಬೇಕು ಎಂದು ಅಂಬೇಡ್ಕರ್ ಹೇಳಿದ್ದರೂ ಈಗಲೂ ಮೀಸಲಾತಿ ಏಕೆ? ನೇಮಕಾತಿ ಗೆ ನೀಡುವ ಮೀಸಲಾತಿ ಬಡ್ತಿಗೆ ಏಕೆ ಎಂದು ಪ್ರಶ್ನಿಸುತ್ತಾರೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ
ಈಗಲೂ ಮೀಸಲಾತಿಯ ಅಗತ್ಯತೆ ಬಗ್ಗೆ ಮೀಸಲಾತಿ ವಿರೋಧಿ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಮೀಸಲಾತಿಯ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಮನದಟ್ಟು ಮಾಡುವುದು ಸಂಘಟನೆಗಳ ಕೆಲಸ. ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆ, ಸಮಾಲೋಚನೆ ನಡೆಸಲು ಆಯೋಗ ಮುಕ್ತ ಅವಕಾಶ ನೀಡಲಿದೆ ಎಂದು ಹೇಳೀದರು.
ಇಂದಿನ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸಾಧ್ಯವಾಗದವರು ಬೆಂಗಳೂರಿನ ಆಯೋಗದ ಕಚೇರಿಗೆ ಬಂದು ತಮ್ಮ ಅಹವಾಲು ಸಲ್ಲಿಸಬಹುದು. ಇದಕ್ಕೆ ಆಯೋಗ ಮುಕ್ತ ಅವಕಾಶ ಕಲ್ಪಿಸಿದೆ ಎಂದರು.