ಲೋಕದರ್ಶನ ವರದಿ
ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಸಂಶೋಧನೆ ಅತ್ಯಂತ ಪ್ರಮುಖ: ಪ್ರೊ. ರೇಣುಕಾ ಮೇಟಿ
ವಿಜಯಪುರ 02: ಸಂಶೋಧನಾ ಲೇಖನಗಳು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಬೆಳಕಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹಾವೇರಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಐ.ಸಿ.ಎಸ್.ಎಸ್.ಆರ್ ಪ್ರಾಯೋಜಿಕತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಹತ್ತು ದಿನಗಳ ಸಮಗ್ರ ಸಾಮಾಜಿಕ ವಿಜ್ಞಾನ ವಿಶ್ಲೇಷಣೆಗಾಗಿ ‘ಸಂಶೋಧನಾ ವಿಧಾನ ತಂತ್ರಗಳು’ ಕುರಿತ ಸಂಶೋಧನಾ ವಿಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಸಂಶೋಧನೆ ಅತ್ಯಂತ ಪ್ರಮುಖವಾಗಿದೆ. ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳು ಹೊಸ ತಿಳುವಳಿಕೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಅಂತರಾಷ್ಟ್ರೀಯ ಮಟ್ಟದ ತಜ್ಞರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತವೆ. ನಿರಂತರ ಅಧ್ಯಯನ ಮತ್ತು ವಿಶ್ಲೇಷಣೆಯ ಮೂಲಕ ಸಂಶೋಧಕರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸಬಹುದು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಸಂಶೋಧಕರು ತಮ್ಮ ಸಂಶೋಧನಾ ಕೌಶಲ್ಯಗಳನ್ನು ಪರಿಷ್ಕರಿಸಲು ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಸಂಶೋಧನೆ ನಡೆಸುವಾಗ ವಿವಿಧ ಸವಾಲುಗಳು ಎದುರಾಗುತ್ತವೆ. ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಉತ್ತಮ ಗುಣಮಟ್ಟದ ಸಂಶೋಧನೆಯನ್ನು ಮಾಡಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂದರು.
ವಿವಿಧ ವಿಭಾಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಪ್ರೊ. ಅನಿತಾ ನಾಟೇಕರ್ ಸ್ವಾಗತಿಸಿದರು. ಸಹ-ಸಂಯೋಜಕ ಡಾ. ಚಂದ್ರಶೇಖರ ಮಠಪತಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಅಶ್ವಿನಿ ತೊರವಿ ನಿರೂಪಿಸಿದರು.