ವಿಜಯಪುರ 11: ಶೈಕ್ಷಣಿಕ ಪ್ರಗತಿಗೆ ಸಂಶೋಧನೆ ಆಧಾರಸ್ತಂಭವಾಗಿದೆ ಎಂದು ಮಹಿಳಾ ವಿವಿಯ ಕಲಾ ನಿಕಾಯದ ಡೀನ್ ಪ್ರೊ. ನಾಮದೇವಗೌಡ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಐ.ಸಿ.ಎಸ್.ಎಸ್.ಆರ್ ಪ್ರಾಯೋಜಿಕತ್ವದಲ್ಲಿ ಗುರುವಾರ ಆಯೋಜಿಸಿದ್ದ ಹತ್ತು ದಿನಗಳ ಸಮಗ್ರ ಸಾಮಾಜಿಕ ವಿಜ್ಞಾನ ವಿಶ್ಲೇಷಣೆಗಾಗಿ ‘ಸಂಶೋಧನಾ ವಿಧಾನ ತಂತ್ರಗಳು’ ಕುರಿತ ಸಂಶೋಧನಾ ವಿಧಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಸಂಶೋಧನೆಗಾಗಿ ಅಗತ್ಯವಾಗುವ ಸಾಧನಗಳು, ಸೌಲಭ್ಯಗಳು ಹಾಗೂ ತಂತ್ರಜ್ಞಾನಗಳ ಕುರಿತು ಈ ಕಾರ್ಯಾಗಾರ ಸ್ಪಷ್ಟತೆ ನೀಡಿದೆ. ಇಂದಿನ ಯುಗದಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಸಂಶೋಧನೆಯ ಪ್ರಮುಖ ಭಾಗವಾಗಿದ್ದು, ಸಂಶೋಧಕರು ತಮ್ಮ ಕಾರ್ಯದಲ್ಲಿ ಈ ತಂತ್ರಜ್ಞಾನಗಳನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಯ ಮುಖ್ಯ ಗ್ರಂಥಪಾಲಕ ಪ್ರೊ. ಗವಿಸಿದ್ದಪ್ಪ ಆನಂದಳ್ಳಿ ಮಾತನಾಡಿ, ಕಾರ್ಯಾಗಾರದ ಮಹತ್ವ ಹಾಗೂ ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋರ್ಸ್ ನಿರ್ದೇಶಕಿ ಪ್ರೊ. ಅನಿತಾ ಆರ್. ನಾಟೆಕರ್ ಮಾತನಾಡಿ, ಸಮಾಜದ ನೀತಿ ಹಾಗೂ ಪ್ರಗತಿಯನ್ನು ರೂಪಿಸುವಲ್ಲಿ ಸಂಶೋಧನೆಯು ಮಹತ್ವದ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಪ್ರಗತಿಯ ಜೊತೆಗೆ ಪರಿಣಾಮಕಾರಿ ಸಂಶೋಧನೆಗಾಗಿ, ಸಂಶೋಧನೆಯ ವಿಧಾನದ ಅಡಿಪಾಯ ಗಟ್ಟಿಯಾಗಿರಬೇಕು ಎಂದರು.
ವಿವಿಯ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕೋರ್ಸ್ ಸಹ ನಿರ್ದೇಶಕ ಡಾ.ಚಂದ್ರಶೇಖರ ಎಂ. ಮಠಪತಿ ಕಾರ್ಯಕ್ರಮದ ವರದಿ ವಾಚನ ಮಾಡಿದರು. ನಿರ್ವಹಣಾ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅಶ್ವಿನಿ ತೊರವಿ ನಿರೂಪಿಸಿದರು. ಅರ್ಥಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು.