ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಕೂಡಲೇ ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹ
ಹಾವೇರಿ 25: ರಾಜ್ಯದಲ್ಲಿ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಕೂಡಲೇ ರದ್ದುಪಡಿಸಬೇಕೆಂದು ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಮಹಾಂತೇಶ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರವು ಈ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸುವ ಮುನ್ನ ಯಾವುದೇ ಪೂರ್ವ ತಯಾರಿ ನಡೆಸಿರಲಿಲ್ಲ. ಇದರಿಂದ ಸ್ವಂತ ಜಾಗ ಮತ್ತು ಖಾಯಂ ಬೋಧಕರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಅವು ಬಳಲುತ್ತಿದ್ದವು. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಿಂದ ಬೇರಿ್ಡಸಿ ಈ ಜಿಲ್ಲಾ ಮಟ್ಟದ ವಿ.ವಿ.ಗಳನ್ನು ಸ್ಥಾಪಿಸಿ ಕಾಲೇಜುಗಳನ್ನು ಸಂಯೋಜಿಸಲಾಗಿತ್ತು. ಇಂತಹ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. ಹೀಗೆ ತರಾತುರಿಯಲ್ಲಿ ಈ ವಿಶ್ವವಿದ್ಯಾಲಯಗಳನ್ನು ಆರಂಬಿಸಿದ್ದ ಬಿಜೆಪಿ ಅದಕ್ಕೆ ಯಾವುದೇ ಹಣಕಾಸಿನ ನೆರವನ್ನು ನೀಡಿರಲಿಲ್ಲ.ಆದರೆ ಇದೀಗ ಅದಕ್ಕೆ ಅಗತ್ಯವಿರುವ ಹಣಕಾಸು ನೆರವು ನೀಡಿ ಅವುಗಳನ್ನು ಬಲಪಡಿಸಬೇಕಾದ ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕ ನೆಪವನ್ನು ಮುಂದುಮಾಡಿ ಆ ವಿ.ವಿ.ಗಳನ್ನು ಮುಚ್ಚುವ ನಿರ್ಧಾರಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಒಟ್ಟಾರೆ ರಾಜ್ಯದ ಒಂಬತ್ತು ವಿವಿಗಳ ನೂರಾರು ಕಾಲೇಜುಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನೂರಾರು ಅದ್ಯಾಪಕರು ಇತರೆ ಸಿಬ್ಬಂದಿಗಳು ಇದರಿಂದ ಆತಂತ್ರಗೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ.
ಅಗತ್ಯವಿರುವ ಹಣಕಾಸಿನ ನೆರವನ್ನು ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಬೇಕು.ಆ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮತ್ತು ಅಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಸಂರಕ್ಷಿಸಬೇಕು. ಇಲ್ಲವಾದಲ್ಲಿ ತೀವ್ರತೆರನಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಮಹೇಶ ಪತ್ತಾರ, ಮುಖಂಡರಾದ ಅಂದಾನೆಪ್ಪ ಹೆಬಸೂರು, ಬಸವರಾಜ ಪೂಜಾರ, ಬಸವರಾಜ್ ಎಸ್, ರೇಣುಕಾ ಪಿ.ಕೆ, ಬೀರ್ಪ ಸೂರಣಗಿ, ಹುಸೇನಸಾಬ ಏರಿಮನಿ, ಸುಭಾಸ ಎಸ್, ಕೃಷ್ಣಾ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.