ಅಥಣಿ-ಶ್ರವಣಬೆಳಗೊಳ ಬಸ್ ಸಂಚಾರ ಪ್ರಾರಂಭಿಸಲು ಮನವಿ

Request to start Athani-Shravanabelagola bus service

ಕಾಗವಾಡ 13: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಕೃಷ್ಣಾ ನದಿ ತೀರದ ಹಲವಾರು ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಸುಕ್ಷೇತ್ರ ಶ್ರವಣಬೆಳಗೊಳಕ್ಕೆ ಹೋಗುತ್ತಾರೆ. ಅವರಿಗೆ ಅಥಣಿ ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆಯವರಿಗೆ ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ ಹಾಗೂ ಮತ್ತಿತರರು ಕೂಡಿ ಮನವಿ ನೀಡಿ, ಬಸ್ ಪ್ರಾರಂಭಿಸುವಂತೆ ಮನವಿ ಮಾಡಿದರು.  

ಹಾಸನ ಜಿಲ್ಲೆಯ ಶ್ರೀಕ್ಷೇತ್ರ ಶ್ರವಣಬೆಳಗೊಳವು ವಿಶ್ವವಿಖ್ಯಾತ ಏಕ ಶಿಲೆಯಿಂದ ನಿರ್ಮಾಣವಾದ 58 ಅಡಿ ಎತ್ತರದ ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ನೆಲೆಸಿರುವ ಧಾರ್ಮಿಕ ಹಾಗೂ ಪವಿತ್ರ ಜೈನ ಯಾತ್ರಾ ತಾಣವಾಗಿದೆ. ಸುಮಾರು 2300 ವರ್ಷಗಳ ಇತಿಹಾಸವಿರುವ ಶ್ರವಣಬೆಳಗೊಳದಲ್ಲಿ ಜೈನ ಬಸದಿಗಳು, ಗುಹೆಗಳು, ಸ್ಮಾರಕಗಳು ನಿಷಿಧಿ ಮಂಟಪಗಳು 550ಕ್ಕೂ ಶಿಲಾ ಶಾಸನಗಳು ಇರುತ್ತವೆ. ಭಗವಾನ್ ಬಾಹುಬಲಿ ಸ್ವಾಮಿಯ ದರ್ಶನ ಕ್ಕೆ ದೇಶ -ವಿದೇಶಗಳಿಂದ ಯಾತ್ರಿಕರು, ಭಕ್ತರುಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಜರುಗುತ್ತದೆ. ಆದ್ದರಿಂದ ಅಥಣಿ,ಕಾಗವಾಡ, ಚಿಕ್ಕೋಡಿ, ಬೆಳಗಾವಿ ಈ ಭಾಗದಲ್ಲಿ ಜೈನ ಸಮುದಾಯದವರು ಹೆಚ್ಚಾಗಿದ್ದು, ಇವರುಗಳಿಗೆ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಹೋಗಿ ಬರಲು ಎರಡು ಬಸ್ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.  

ಜೈನ ಸಮುದಾಯದ ಮುಖಂಡರ ಮನವಿಯನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆಯವರು ಮನವಿ ಸ್ವೀಕರಿಸಿ ಈ ಕುರಿತು ನಮ್ಮ ನಿಗಲದ ಅಧ್ಯಕ್ಷರೊಂದಿಗೆ ಚರ್ಚಿಸಿ ಅಥಣಿಯಿಂದ ಶ್ರವಣಬೆಳಗೊಳಕ್ಕೆ ಯಾವಾಗ ಮತ್ತು ಯಾವ ಮಾರ್ಗವಾಗಿ ಬಸ್ ಓಡಿಸಬೇಕೆಂದು ಚರ್ಚಿಸಿ ಶೀಘ್ರ ಬಸ್ ಓಡಿಸುವ ವ್ಯವಸ್ಥೆ ಕಲ್ಪಿಸಲಾಗುವುದೆಂದು ಶಾಸಕ ರಾಜು ಕಾಗೆ ತಿಳಿಸಿದರು.  

ಈ ವೇಳೆ ಅಥಣಿ ಶಾಸಕ ಲಕ್ಷ್ಮಣ ಸವದಿ, ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ, ಮುಖಂಡರಾದ ಎ.ಸಿ.ಪಾಟೀಲ, ಶ್ರೀಕಾಂತ ಅಸ್ಕಿ, ನೇಮಿನಾಥ ಯಕ್ಸಂಬಿ, ಪ್ರದೀಪ ನಂದಗಾಂವೆ ಸೇರಿದಂತೆ ಅನೇಕರು ಇದ್ದರು.