ಕಲಾವಿದರಿಗೆ ನೀಡಲಾಗುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿಸುವಂತೆ ಮನವಿ

ಲೋಕದರ್ಶನ ವರದಿ

ಶೇಡಬಾಳ 16: ಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಉಗಾರ ಬುದ್ರುಕ ಜಿಲ್ಲಾ ಮಟ್ಟದ ಗ್ರಾಮೀಣ ಕಲಾವಿದರ ವೇದಿಕೆಯ ಸದಸ್ಯರು ವಿಜಯಪೂರದ ಸಂಸದ ರಮೇಶ ಜಿಗಜಿಣಗಿಯವರಿಗೆ ಮನವಿ ಪತ್ರ ನೀಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಜಿಲ್ಲಾ ಮಟ್ಟದ ಗ್ರಾಮೀಣ ಕಲಾವಿದರ ವೇದಿಕೆಯ ಪದಾಧಿಕಾರಿಗಳು ಅಥಣಿಯ ಕಾಡಸಿದ್ಧೇಶ್ವರ ಆಶ್ರಮ ಡಾ. ಕಾಡಯ್ಯ ಸ್ವಾಮಿಜಿಯವರ ನೇತೃತ್ವದಲ್ಲಿ ಮಂಗಳವಾರ ದಿ 15 ರಂದು ಸಂಸದ ರಮೇಶ ಜಿಗಜಿಣಗಿ ಅವರ ನಿವಾಸದಲ್ಲಿ ಭೇಟಿಯಾಗಿ ಬೇಡಿಕೆಗಳ ಮನವಿ ಪತ್ರ ಅರ್ಪಿಸಿ ಒತ್ತಾಯಿಸಿದರು. ಸಂಸದರಿಗೆ ಮನವಿ ಪತ್ರ ಅಪರ್ಿಸಿ ಕಾರ್ಯದರ್ಶಿ  ಸುರೇಶ ಕೋಳಿ ಮಾತನಾಡುತ್ತಾ ಸರ್ಕಾರ ಈಗ ನೀಡುತ್ತಿರುವ 1500 ರೂ. ಯಾವುದಕ್ಕೂ ಸಾಲದಂತಾಗಿದೆ. 1500 ರೂ.ದಲ್ಲಿ ಕಲಾವಿದರು ಜೀವನ ಸಾಗಿಸುವುದೇ ದುಸ್ತರವಾಗಿದೆ. ಮುಪ್ಪಿನಾವಸ್ಥೆ ಆವರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಅನಾರೋಗ್ಯದಿಂದ ಬಳಲುತ್ತಿದ್ದು, ಸರ್ಕಾರ ನೀಡುತ್ತಿದ್ದ 1500 ರೂ. ಯಾವುದಕ್ಕೂ ಸಾಲದಂತಾಗಿದೆ. ಕಾರಣ ಸರ್ಕಾರ ಕಲಾವಿದರಿಗೆ 4 ರಿಂದ 5 ಸಾವಿರ ರೂ. ವರೆಗೆ ಮಾಶಾಸನ ನೀಡುವಂತೆ ಒತ್ತಾಯಿಸಿದರು. ಅಲ್ಲದೇ ಈಗಿರುವ ವಯೋಮಿತಿಯನ್ನು ಸಾಮಾನ್ಯರಿಗೆ 58, ಅಂಗವಿಕಲರಿಗೆ 40 ವರ್ಷವಿದ್ದು, ಈಗಿರುವ ವಯೋಮಿತಿಯನ್ನು ಕಡಿಮೆಗೊಳಿಸಿ ಸಾಮಾನ್ಯರಿಗೆ 50 ವರ್ಷ ಹಾಗೂ ಅಂಗವಿಕಲರಿಗೆ 30 ವರ್ಷ ನಿಗದಿಗೊಳಿಸುವಂತೆ ಒತ್ತಾಯಿಸಿದರು. 

ಇದೇ ಪ್ರಕಾರ ಇನ್ನುಳಿದ ಕರ್ನಾಟಕದಲ್ಲಿನ ಸಂಸದರಿಗೆ, ಶಾಸಕರಿಗೆ, ಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿ ಕಲಾವಿದರ ಬೇಡಿಕೆಗಳನ್ನು ಇಡೇರಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದೆಂದು ಸುರೇಶ ಕೋಳಿ ಹೇಳಿದರು. 

ಈ ಸಮಯದಲ್ಲಿ ಅಥಣಿಯ ಕಾಡಸಿದ್ಧೇಶ್ವರ ಆಶ್ರಮ ಡಾ. ಕಾಡಯ್ಯ ಸ್ವಾಮಿಜಿ, ಜಿಲ್ಲಾ ಮಟ್ಟದ ಗ್ರಾಮೀಣ ಕಲಾವಿದರ ವೇದಿಕೆಯ ಅಧ್ಯಕ್ಷ ಬಂಡು ಕುಂಬಾರ, ಕಾರ್ಯದರ್ಶಿ ಸುರೇಶ ಕೋಳಿ, ಡಿ.ಎಸ್.ಚಾಳೇಕರ, ಗಂಗಣ್ಣ ಕುಂಬಾರ, ಭುಜು ಕುಂಬಾರ, ದುಂಡಪ್ಪ ಐಹೊಳೆ, ಪುಂಡಲಿಕ ಕಾಂಬಳೆ, ರಾಮು ಐಹೊಳೆ ಸೇರಿದಂತೆ ಅನೇಕ ಗ್ರಾಮೀಣ ಕಲಾವಿದರು ಇದ್ದರು.