ತೋರಣಗಲ್‌ಗೆ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸಂಡೂರಿಗೆ ನರ್ಸಿಂಗ್ ಕಾಲೇಜು ಮಂಜೂರಿಗೆ ಮನವಿ
ಬೆಳಗಾವಿ 18: ಸಂಡೂರು ಕ್ಷೇತ್ರದಲ್ಲಿ ಸಾಕಷ್ಟು ಉದ್ಯಮಗಳಿದ್ದು, ಇದಕ್ಕಾಗಿ ಕ್ಷೇತ್ರದಲ್ಲಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ತೋರಣಗಲ್‌ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಬೇಕು. ಜೊತೆಗೆ ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಸಂಡೂರಿನಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಮಂಜೂರು ಮಾಡುವಂತೆ ಶಾಸಕಿ ಈ.ಅನ್ನಪೂರ್ಣ ಅವರು ಮನವಿ ಮಾಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು ಮುಂತಾದ ತಜ್ಞ ವೈದ್ಯರ ಕೊರತೆ ನೀಗಿಸಬೇಕು ಎಂದು ಮನವಿ ಮಾಡಿದರು.ಕ್ಷೇತ್ರದಲ್ಲಿ ಗಣಿಗಾರಿಕೆ, ಉಕ್ಕು, ಪೇಂಟ್ ಹೀಗೆ ಹಲವು ಕಾರ್ಖಾನೆ, ಉದ್ದಿಮೆಗಳಿವೆ. ಕ್ಷೇತ್ರದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ತೋರಣಗಲ್‌ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಬೇಕು, ಹಾಗೂ ಆರೋಗ್ಯ ಕ್ಷೇತ್ರ ವೃದ್ಧಿಗೆ ಸಂಡೂರು ಪಟ್ಟಣದಲ್ಲಿ ನರ್ಸಿಂಗ್ ಕಾಲೇಜು ಮಂಜೂರು ಮಾಡಬೇಕು ಎಂದು ಶಾಸಕಿ ಈ.ಅನ್ನಪೂರ್ಣ ಅವರು ಮನವಿ ಮಾಡಿದರು.