ಲೋಕದರ್ಶನ ವರದಿ
ಬೈಲಹೊಂಗಲ 27: ಪಟ್ಟಣ, ತಾಲೂಕಿನಾದ್ಯಂತ ಹದಗೆಟ್ಟ ರಸ್ತೆಗಳ ಧೂಳಿನಿಂದ ಮುಕ್ತಿ ನೀಡಿ ಎಂದು ಆಗ್ರಹಿಸಿ, ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕತರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಅರ್ಪಿಸಲಾಯಿತು.
ಪ್ರತಿಭಟಣಾ ಮೆರವಣಿಗೆ ಕೇಂದ್ರ ಬಸ್ನಿಲ್ದಾಣದ ಕರೆಮ್ಮ ದೇವಿ ದೇವಸ್ಥಾನ ಹತ್ತಿರ ಮುಖಕ್ಕೆ ಮಾಸ್ಕ ಧರಿಸಿಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪ್ರತಿಭಟಣಾಕಾರರನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ರಫೀಕ ಬಡೇಘರ ಬೈಲಹೊಂಗಲ ಐದು ತಾಲೂಕುಗಳ ಉಪವಿಭಾಗವಾಗಿದ್ದು, ದಿನನಿತ್ಯ ಸಾವಿರಾರು ಜನರು ತಮ್ಮ ಸರ್ಕಾರಿ, ಖಾಸಗಿ ಕೆಲಸಗಳಿಗಾಗಿ ಬೈಲಹೊಂಗಲ ನಗರವನ್ನು ಅವಲಂಭಿಸಿದ್ದಾರೆ. ಹದಗೆಟ್ಟ ರಸ್ತೆ ಧೂಳಿನಿಂದ ವ್ಯಾಪಾರಸ್ಥರು, ವಾಹನ ಸವಾರರು, ಪಾದಚಾರಿಗಳು, ವಯೋವೃದ್ದರು ರೋಗದಿಂದ ಬಳಲುವಂತಾಗಿದೆ. ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ವೀರರಾಣಿ ಕಿತ್ತೂರು ಚನ್ನಮ್ಮ ಅಶ್ವಾರೂಢ ಮೂರ್ತಿಯಿಂದ ರಾಯಣ್ಣನ ವೃತ್ತವರೆಗಿನ ರಸ್ತೆಯಂತೂ ತೀರಾ ಹದಗೆಟ್ಟಿದ್ದು, ಕೇಂದ್ರ ಬಸ್ ನಿಲ್ದಾಣ, ಶಾಲಾ, ಕಾಲೇಜುಗಳು, ಆಸ್ಪತ್ರೆಗಳು ಈ ರಸ್ತೆಗೆ ಹೊಂದಿಕೊಂಡಿವೆ. ಬೃಹತ ಗಾತ್ರದ ವಾಹನದ ಹಿಂದೆ ಬರುವ ವಾಹನ ಸವಾರರು, ಪಾದಚಾರಿಗಳು ಕಣ್ಣು ಮತ್ತು ಮೂಗಿನಲ್ಲಿ ಮಣ್ಣಿನ ಧೂಳನ್ನು ತುಂಬಿಕೊಂಡು ಅಲರ್ಜಿಯಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚ ಮಾಡುತ್ತಿದ್ದು ಆದರೆ ಬೈಲಹೊಂಗಲ ನಗರದಲ್ಲಿ ಇದಕ್ಕೆ ವಿರುದ್ದವಾಗಿದೆ. ಪುರಸಭೆ, ಲೋಖೋಪಯೋಗಿ ಇಲಾಖೆಗಳು ಯಾವುದೇ ಕ್ರಮ ಜರುಗಿಸಿಲ್ಲ. ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ಈ ವಿಷಯ ಗೊತ್ತಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಕೂಡಲೇ ಈ ಕುರಿತು ಸಭೆ ಕರೆದು ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸುವದಾಗಬೇಕು. ಒಂದು ವಾರದಲ್ಲಿ ಮೇಲ್ಕಾಣಿಸಿದ ಸಮಸ್ಯೆಗೆ ಪರಿಹಾರ ಸೂಚಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಈ ಬೇಡಿಕೆಗಳಿಗೆ ಆಗ್ರಹಿಸಿ ಆಮರಣ ಉಪವಾಸ ಕೈಗೊಳ್ಳಲಾಗುವದೆಂದು ಅವರು ಎಚ್ಚರಿಸಿದರು. ಉಳವಪ್ಪಾ ಅಂಗಡಿ, ಪಕ್ರು ಕುಸಲಾಪೂರ ಮಾತನಾಡಿ, ರಾಯಣ್ಣ ವೃತ್ತದಿಂದ ಅಂಬೇಡ್ಕರ ಉದ್ಯಾನ ವರೆಗಿನ ರಸ್ತೆಯು ಇಕ್ಕಟ್ಟಾದ ರಸ್ತೆಯಾಗಿದ್ದು, ಬೈಲಹೊಂಗಲ ಪಟ್ಟಣದ ಪ್ರಮುಖ ವ್ಯಾಪಾರ, ವಹಿವಾಟು, ಶುಕ್ರವಾರ ಸಂತೆ ನಡೆಯುವ ರಸ್ತೆಯಲ್ಲಿ 3 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಆರಭಿಸಲಾಗಿದೆ. ಇಕ್ಕಟ್ಟಾದ ರಸ್ತೆಯನ್ನು ಸುಧಾರಿಸುವ ಬದಲಿಗೆ ರಸ್ತೆ ಅಗಲೀಕರಣ ಮಾಡಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕಾಗಿತ್ತು ಎಂದರು. ಮಹೆತಾಬ ಖುದ್ದನ್ನವರ, ವಿಠ್ಠಲ ಬೆಳ್ಳಿಕಟ್ಟಿ, ವಿಷ್ಣು ಭಾಂವಿಮನಿ, ದಾದಾಫೀರ ಸಂಗೊಳ್ಳಿ, ಆನಂದ ಅಂಗಡಿ, ಬಸವರಾಜ ಕರವಿನಕೊಪ್ಪ, ಶಫೀ ಮುಲ್ಲಾ, ಶುಕ್ರ ನದಾಫ, ಉಳವಪ್ಪಾ ಮತ್ತಿಕೊಪ್ಪ, ಫಕ್ರು ಭಾಗವಾನ, ಮಡಿವಾಳಪ್ಪ ಆನಿಗೋಳ ಹಾಗೂ ಅಟೋ ಚಾಲಕರು ಉಪಸ್ಥಿತರಿದ್ದರು.