ಅನರ್ಹರ ಕ್ಷೇತ್ರಗಳಿಗೆ ಮರುಚುನಾವಣೆ ನಡೆಸುವಂತೆ ಮನವಿ

ಬೆಂಗಳೂರು, ಆ 30    ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಮರುಚುನಾವಣೆ ಘೋಷಣೆ ಮಾಡುವಂತೆ ಜೆಡಿಎಸ್ನ ಮಾಜಿ ಕೈಗಾರಿಕೋದ್ಯಮಿಗಳ ರಾಜ್ಯ ಘಟಕದ ಅಧ್ಯಕ್ಷ ಟಿ ಆರ್ ಪ್ರಸಾದ್ ಗೌಡ, ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ   

 ಕಾಂಗ್ರೆಸ್ ನ 14, ಜೆಡಿಎಸ್ನ 3 ಸೇರಿದಂತೆ 17 ಕ್ಷೇತ್ರಗಳ ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಸಲುವಾಗಿ ಈ ಕ್ಷೇತ್ರಗಳಿಗೆ ಶೀಘ್ರವೇ ಮರುಚುನಾವಣಾ ದಿನಾಂಕವನ್ನು ಘೋಷಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. 

  ಪ್ರಸಾದ್ ಗೌಡ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 

  ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆ ಪ್ರಸಾದ್ ಗೌಡ ಮಾತನಾಡಿ, ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದಿದ್ದಾರೆ. ಆದರೆ ಇದು ಪಕ್ಷದ ನಿರ್ಧಾರವಲ್ಲ, ಪ್ರಚಾರಕ್ಕಾಗಿ ಪ್ರಸಾದ್ ಗೌಡ ಹೀಗೆ ಮಾಡಿರಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.