ಶ್ರೀನಗರ, ಜ23 : ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಉಗ್ರರ ಯಾವುದೇ ಪ್ರಯತ್ನವನ್ನು ತಡೆಯಲು ಕೇಂದ್ರಾಡಳಿತ ಪ್ರದೇಶದ ಬೇಸಿಗೆ ರಾಜಧಾನಿಯಾದ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಣಿವೆಯಲ್ಲಿ ಈ ವರ್ಷದ ಸಂಭ್ರಮಾಚರಣೆಯ ಮುಖ್ಯ ಸ್ಥಳವಾದ ಸೊನ್ವಾರ್‍ನ ಎಸ್ ಕೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸುಗಮವಾಗಿ ನಡೆಯುವಂತಾಗಲು ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಕಾಶ್ಮೀರದಾದ್ಯಂತ ಮುಖ್ಯವಾಗಿ ಗಣರಾಜ್ಯೋತ್ಸವ ನಡೆಯಲಿರುವ ಶ್ರೀನಗರದಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ ಎಂದು ಅಧಿಕೃತ ಮೂಲಗಳು ಯುಎನ್‍ಐಗೆ ತಿಳಿಸಿವೆ.
ಉಗ್ರರ ಯಾವುದೇ ದಾಳಿಯನ್ನು ತಡೆಯಲು ಜನರು ಓಡಾಡುವ ರಸ್ತೆಗಳು ಸೇರಿದಂತೆ ನಗರದಲ್ಲಿ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಕಣಿವೆಯ ಇತರ ಜಿಲ್ಲೆಗಳಿಂದ ಶ್ರೀನಗರಕ್ಕೆ ಹೋಗುವ ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿವೆ. ತಪಾಸಣಾ ಕೇಂದ್ರಗಳಲ್ಲಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ನಗರದೊಳಗೆ ಪ್ರವೇಶಿಸುವ ಜನರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ನಗರದಲ್ಲಿ ಕೆಲ ದಿನಗಳ ಹಿಂದೆ ಜೈಶ್-ಎ-ಮೊಹಮದ್ (ಜೆಎಂ) ಸಂಘಟನೆಯ ಜಾಲವನ್ನು ಪತ್ತೆ ಮಾಡಿ, ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಮಧ್ಯೆ, ಎಸ್ ಕೆ ಕ್ರಿಕೆಟ್ ಕ್ರೀಡಾಂಗಣ ಸುತ್ತಮುತ್ತ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಶ್ರೀನಗರದಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ಗಮನದಲ್ಲಿಟ್ಟುಕೊಂಡು ಕಟ್ಟೆಚ್ಚರ ವಹಿಸಲಾಗಿದೆ. ಗಣರಾಜ್ಯೋತ್ಸವದ ಮುನ್ನ ನಗರದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ ಬಾಗ್ ಸಿಂಗ್ ಇತ್ತೀಚೆಗೆ ಹೇಳಿದ್ದರು. ಆದರೂ, ಅಂತಹ ಯಾವುದೇ ದಾಳಿಯನ್ನು ಎದುರಿಸಲು ಭದ್ರತಾ ಪಡೆಗಳು ಸಂಪೂರ್ಣವಾಗಿ ಸನ್ನದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ವರ್ಷ ಆರಂಭವಾಗಿದೆ ಎಂದು ಡಿಜಿಪಿ ಪ್ರತಿಪಾದಿಸಿದ್ದಾರೆ.