ನವದೆಹಲಿ, ಆಗಸ್ಟ್ 6 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ವಿಧಿ 370 ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಲೋಕಸಭೆಯಲ್ಲಿ ಕಾಶ್ಮೀರ ಪುನರ್ ವಿಂಗಡನೆ ವಿಧೇಯಕ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆಯನ್ನು ಬಿಕ್ಕಟ್ಟಿಗೆ ತಳ್ಳಿದೆ.
ಜನರಿಂದ ಆಯ್ಕೆಗೊಂಡ ಚುನಾಯಿತ ಪ್ರತಿನಿಧಿಗಳನ್ನು ಗೃಹಬಂಧನದಲ್ಲಿರಿಸಿ, ಅವರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ನಿರ್ಧಾರ ಕೈಗೊಂಡು ರಾಜ್ಯಾಂಗ ಉಲ್ಲಂಘಿಸಿದೆ ಎಂದು ಟೀಕಿಸಿದ್ದಾರೆ.
"ಭಾರತ ಕೇವಲ ಭೂ ಪ್ರದೇಶ ಮಾತ್ರ ಹೊಂದಿಲ್ಲ, ಭೂ ಪ್ರದೇಶದೊಂದಿಗೆ ಜನರನ್ನೂ ಒಳಗೊಂಡಿದೆ. ಏಕಪಕ್ಷೀಯ ನಿರ್ಧಾರ ಕೈಗೊಂಡು ಜಮ್ಮು ಕಾಶ್ಮೀರ ಜನರನ್ನು ನೋಯಿಸುವುದು ರಾಷ್ಟ್ರೀಯ ಸಮಗ್ರತೆ ಎಂದು ಕರೆಸಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಭಾವೋದ್ವೇಗದಿಂದ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ಮತ್ತು 35 "ಎ" ನೇ ವಿಧಿಗಳನ್ನು ಕೇಂದ್ರ ಸರ್ಕಾರ ಸೋಮವಾರ ರದ್ದುಗೊಳಿಸಿದೆ. ಆದೇ ರೀತಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ರಾಜ್ಯ ಸ್ಥಾನಮಾನ ತೆಗೆದುಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ.
ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಗಿದೆ. ಇವುಗಳಿಗೆ ಸಂಬಂಧಿಸಿದ ಶಾಸನ ಬದ್ಧ ನಿರ್ಣಯ ಮತ್ತು ವಿಧೇಯಕಗಳನ್ನು ಕೇಂದ್ರ ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಿತು. ಈ ಮಸೂದೆ ಲೋಕಸಭೆಯಲ್ಲಿ ಔಪಚಾರಿವಾಗಿ ಮಂಡಿಸಲಾಗಿದೆ ಲೋಕಸಭೆಯಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ 353 ಸದಸ್ಯರ ಬೆಂಬಲದೊಂದಿಗೆ ಈ ಮಸೂದೆಯನ್ನು ಭಾರಿ ಬಹುಮತದಿಂದ ಅಂಗೀಕರಿಸುವ ನಿರೀಕ್ಷೆಯಿದೆ.