ಬೆಂಗಳೂರು, ಅ.10: ನೆರೆ ಹಾಗೂ ಅತಿವೃಷ್ಟಿ ಸಂತ್ರಸ್ತರ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಸರ್ಕಾರ 2,949 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಆದರೆ ಅಧಿಕೃತ ದಾಖಲೆಗಳು ಹಾಗೂ ಮಾಹಿತಿ ಪ್ರಕಾರ ನೆರೆ ಸಂತ್ರಸ್ತರ ಪುನರ್ವಸತಿ ಪರಿಹಾರ ಕಾರ್ಯಗಳಿಗೆ ಇದುವರೆಗೆ ಖರ್ಚು ಮಾಡಿರುವುದು ಕೇವಲ 352 ಕೋಟಿ ರೂಗಳು ಮಾತ್ರ. ಅತಿವೃಷ್ಟಿಯಿಂದ ಸಂತ್ರಸ್ತರಾದ ಪ್ರತಿ ಕುಟುಂಬಗಳಿಗೆ 10 ಸಾವಿರ ರೂ.ನಂತೆ ಅಕ್ಟೋಬರ್ 5 ಮಾಹಿತಿ ಪ್ರಕಾರ 2 ಲಕ್ಷದ 03 ಸಾವಿರದ 633 ಕುಟುಂಬಗಳಿಗೆ ಬರೋಬ್ಬರಿ 203.63 ಕೋಟಿ ರೂ ಪರಿಹಾರ ವಿತರಿಸಲಾಗಿದೆ. ಮನೆ ಕಳೆದುಕೊಂಡ ನಿರ್ವಸಿತರಿಗೆ ಇದುವರೆಗೆ ಬಿಡುಗಡೆ ಮಾಡಿರುವುದು 43,611 ಕುಟುಂಬಗಳಿಗೆ ಬಿಡುಗಡೆಯಾಗಿರುವುದು ಕೇವಲ 137.44 ಕೋಟಿ ರೂ. ಮಾತ್ರ. ಇದರಲ್ಲಿ ಪೂರ್ಣ ಹಾನಿಗೀಡಾಗಿ ಪರಿಹಾರಕ್ಕೆ ಅರ್ಹವಾಗಿರುವ ಮನೆಗಳ ಸಂಖ್ಯೆ 10 ಸಾವಿರ ಇದ್ದರೂ ಪರಿಹಾರ ಕೊಟ್ಟಿದ್ದು ಮಾತ್ರ 5176 ಕುಟುಂಬಗಳಿಗೆ 49.69 ಕೋಟಿ ರೂ ಮಾತ್ರ ಎಂದು ಅಂಕಿ ಅಂಶ ತಿಳಿಸುತ್ತದೆ. ಭಾಗಶಃ ಹಾನಿಗೀಡಾದ ಮನೆಗಳ ಸಂಖ್ಯೆ 26,772 ಆಗಿದ್ದರೂ, ಪರಿಹಾರಕ್ಕೆ ಅರ್ಹವಾದ ಮನೆಗಳ ಸಂಖ್ಯೆ ಕೇವಲ 14,910 ಮಾತ್ರ. ಈ ಕುಟುಂಬಗಳಿಗೆ 35.66 ಕೋಟಿ ರೂ ಬಿಡುಗಡೆಯಾಗಿದೆ. ಅದೇ ರೀತಿ ಅಲ್ಪ ಪ್ರಮಾಣದಲ್ಲಿ ಹಾನಿಗೀಡಾದ ಮನೆಗಳ ಸಂಖ್ಯೆ 68,817 ಇದ್ದೂ ಪರಿಹಾರ ನೀಡಿರುವುದು ಕೇವಲ 23,534 ಮನೆಗಳಿಗೆ 51.81 ಕೋಟಿ ರೂ ಮಾತ್ರ. ಪೂರ್ಣ, ಭಾಗಶಃ, ಅಲ್ಪ ಪ್ರಮಾಣದ ಹಾನಿಗೀಡಾಗಿ ಪರಿಹಾರಕ್ಕೆ ಅರ್ಹವಾದ ಮನೆಗಳ ಸಂಖ್ಯೆ ಒಟ್ಟು 43,611 ಆಗಿದ್ದು, ಇವುಗಳಿಗೆ ಒಟ್ಟು 137.44 ಕೋಟಿ ರೂ. ನೀಡಲಾಗಿದೆ. 3378 ಕುಟುಂಬಗಳು ಬಾಡಿಗೆ ಮನೆಯಲ್ಲಿರಲು ತೀರ್ಮಿನಿಸಿದ್ದು ಈ ಕುಟುಂಬ ಗಳಿಗೆ ಪಾವತಿಸಿದ ಬಾಡಿಗೆ ಮೊತ್ತ ಕೇವಲ 1.68 ಕೋಟಿ ರೂ ಮಾತ್ರ. ಇನ್ನು 1385 ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದರು. ಇದಕ್ಕೆ 6.92 ಕೋಟಿ ರೂ ವೆಚ್ಚವಾದರೂ ಜಿಲ್ಲಾಡಳಿತ ಬಿಡುಗಡೆ ಮಾಡಿರುವುದು ಕೇವಲ 3.17 ಕೋಟಿ ರೂ ಮಾತ್ರ ಎಂದು ಮಾಹಿತಿ ತಿಳಿಸುತ್ತದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಧ್ಯಂತರ ಪರಿಹಾರದ ಹಣ 1200 ಕೋಟಿ ರೂ, ಲೋಕೋಪ ಯೋಗಿ ಇಲಾಖೆ ಪುನರ್ವಸತಿ ಕಾರ್ಯಗಳಿಗೆ ವೆಚ್ಚ ಮಾಡಿರುವ 500 ಕೋಟಿ ರೂ, ರಾಜ್ಯ ಸರ್ಕಾ ರ ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ 1000 ಕೋಟಿ ರೂ ಸೇರಿ ರಾಜ್ಯ ಸರ್ಕಾರ 2,949 ಕೋಟಿ ರೂ ಎಂದು ಅಂಕಿ ಅಂಶ ತಿಳಿಸುತ್ತಿದೆ. ಇದು ನೆರೆ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರಕ್ಕೆ ಘೋಷಿತ ಅನುದಾನದಲ್ಲಿ ವೆಚ್ಚ ಮಾಡಿರುವುದಾಗಿದೆ. ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಕುಟುಂಬಗಳಿಗೆ ನೀಡಲಾದ ಪರಿಹಾರ, ಮೃತಪಟ್ಟ ಜಾನುವಾರುಗಳಿಗೆ ನೀಡಿದ ಪರಿಹಾರ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ನಿರಾಶ್ರಿತರಿಗೆ ಕಾಳಜಿ ಕೇಂದ್ರದಲ್ಲಿ ಕಲ್ಪಿಸಲಾದ ಆಶ್ರಯ, ಊಟ, ವೈದ್ಯಕೀಯ ಸೌಲಭ್ಯದ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಎಲ್ಲಾ ವೆಚ್ಚಗಳನ್ನು ಪರಿಗಣಿಸಿದರೂ ರಾಜ್ಯ ಸರ್ಕಾರದಿಂದ ನೆರೆ, ಅತಿವೃಷ್ಟಿ ಸಂತ್ರಸ್ತರ ಪುನರ್ವಸತಿಗೆ ವೆಚ್ಚ ಮಾಡಿರುವುದು ಅಂದಾಜು 1000 ಕೋಟಿ ರೂಗಳೂ ಮೀರಿಲ್ಲ ಎನ್ನುವುದೇ ವಾಸ್ತವ. ಆಗಸ್ಟ್ 4ರಂದು ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಅತಿವೃಷ್ಟಿಯಿಂದ ಎಲ್ಲವನ್ನು ಕಳೆದುಕೊಂಡ 22 ಜಿಲ್ಲೆಗಳ 103 ತಾಲೂಕುಗಳ ಲಕ್ಷಾಂತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಶೇ. 50 ರಷ್ಟು ಮಾತ್ರ ಯಶಸ್ವಿಯಾಗಿದ್ದು ಇನ್ನೂ ಶೇ 50 ಕುಟುಂಬಗಳಿಗೆ ಮನೆ ಪರಿಹಾರ, ಶೆಡ್, ತಾತ್ಕಾಲಿಕ ಪರಿಹಾರ ಲಭ್ಯವಾಗಿಲ್ಲ. ಬೆಳೆ ಪರಿಹಾರವನ್ನು ಸರ್ಕಾರ ಎಂದು ನೀಡುತ್ತದೆಯೋ, ಎಷ್ಟು ನೀಡುತ್ತದೆಯೋ ಎಂಬುದೇ ಇನ್ನೂ ಯಕ್ಷ ಪ್ರಶ್ನೆಯಾಗಿದೆ.