ಕೋವಿಡ್ ಜಿಲ್ಲಾಸ್ಪತ್ರೆಯಿಂದ 6 ಜನರ ಬಿಡುಗಡೆ

ಬಳ್ಳಾರಿ,ಜೂ.08: ಕೋವಿಡ್ನಿಂದ 6 ಜನರು ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಅವರನ್ನು ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಜಿಲ್ಲಾಸ್ಪತ್ರೆಯಲ್ಲಿ 18 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಸಾವನ್ನಪ್ಪಿದ್ದು, ಇದುವರೆಗೆ 49 ಜನರು ಬಿಡುಗಡೆಯಾದಂತಾಗಿದೆ.

ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ವಿವರ: ಪಿ-2153 40ವರ್ಷದ ಮಹಿಳೆ ಕೌಲ್ ಬಜಾರ್ನ ಅಜಾದ್ ನಗರದವರು, ಪಿ-1948 50 ವರ್ಷದ ಮಹಿಳೆ ತೆಕ್ಕಲಕೋಟೆ, ಪಿ-3247 13 ವರ್ಷದ ಪುರುಷ ಹರಪನಹಳ್ಳಿ, ಪಿ-3245 38 ವರ್ಷದ ಪುರುಷ ಕೊಟ್ಟೂರಿನ ಪೊಲೀಸ್ ಸಿಬ್ಬಂದಿಗೆ ಕರ್ತವ್ಯದ ವೇಳೆ ಸೋಂಕು ತಗುಲಿದ ಹಿನ್ನಲೆ ಇದೆ, ಪಿ-2774 47ವರ್ಷದ ಗಂಡು ಮೋಕಾದ ತಂಬ್ರಹಳ್ಳಿ, ಪಿ-2930 19 ವರ್ಷದ ಯುವತಿ ಜಿ.ನಾಗೇನಹಳ್ಳಿಯವರಾಗಿದ್ದು ಮಹಾರಾಷ್ಟ್ರದ ಟ್ರಾವೆಲ್ ಹಿಸ್ಟರಿ ಇದೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು; ಈ 6 ಜನರು ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಿ ಬಳ್ಳಾರಿಯನ್ನು ಕರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಡಿ.ಎಸ್.ಪಿ ಅರುಣ್ ಕುಮಾರ್ ಅವರು ಮಾತನಾಡಿ ಕರೋನಾ ವೈರಸ್ ಎಲ್ಲಾರನ್ನು ಸಮಾನವಾಗಿ ನೋಡುತ್ತದೆ ;ಅದಕ್ಕೆ ಪೊಲೀಸ್ ಇಲಾಖೆ ಹೊರತುಪಡಿಸಿಲ್ಲ. ಆದ್ದರಿಂದ ವೈರಸ್ನ್ನು ನಾವೆಲ್ಲರೂ ಧೈರ್ಯದಿಂದ ಎದುರಿಸಬೇಕಾಗಿದೆ, ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದವರನ್ನು ಹಳ್ಳಿಗಳಲ್ಲಿ ನೋಡುವ ರೀತಿ ಬದಲಾಗಬೇಕಿದೆ, ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಶ್ರಮ ಶ್ಲಾಘನೀಯ ಎಂದರು.

ಗುಣಮುಖರಾಗಿ ಹೊರಬಂದವರಲ್ಲಿ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ನೀಡಿದರು ಮತ್ತು ಮನಃ ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿ ವೈರಸ್ ವಿರುದ್ಧ ಹೋರಾಡಲು ಬಲತುಂಬಿದರು ಹಾಗೂ ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಈ ಕಾರ್ಯಕ್ಕೆ ನಾವು ಎಂದಿಗೂ ಋಣಿಯಾಗಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ದೈವೀಕ್, ಡಾ.ನಿಖಿಲ್, ಡಾ.ಶಂಕರ್ ನಾಯಕ್, ಡಾ.ಪ್ರಕಾಶ್, ಡಾ.ಉದಯ್ ಶಂಕರ್, ಡಾ.ಚಿತ್ರಶೇಖರ, ಹಾಗೂ ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು ಇದ್ದರು.