2025 ರ ಮೆಲುಕು: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು- ಬೀಳುಗಳ ಸಮ್ಮಿಳನ

2025 ರ ಮೆಲುಕು: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು- ಬೀಳುಗಳ ಸಮ್ಮಿಳನ  Reflections on 2025: A fusion of ups and downs in Uttara Kannada district

*ನಾಗರಾಜ್ ಹರಪನಹಳ್ಳಿ 

ಕಾರವಾರ 31: ಉತ್ತರ ಕನ್ನಡ ಜಿಲ್ಲೆಯ ಜನ ಜೀವನದ ಪಾಲಿಗೆ 2025 ಏಳು ಬೀಳುಗಳ ಸಮ್ಮಿಲನವಾಗಿತ್ತು. ಸಿಹಿ ಕಹಿಯ ಮಿಶ್ರಣವಾಗಿತ್ತು. ಪ್ರಗತಿ ದೃಷ್ಟಿಯಿಂದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ದಾಖಲೆಯಾದರೆ, ಕೃಷಿಕರ ಬದುಕು ಸಮಾಧಾನಕರವಾಗಿತ್ತು. ರಸ್ತೆಯಂಥ ಮೂಲಭೂತ ಸೌಕರ್ಯಗಳು ಕುಂಟುತ್ತಲೇ ಸಾಗಿದವು.ರಾಷ್ಟ್ರೀಯ ಹೆದ್ದಾರಿ -66 ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದು ,ಹನ್ನೊಂದು ವರ್ಷ ಮುಗಿಸಿ, ಹನ್ನೆರಡನೇ ವರ್ಷಕ್ಕೆ ಕಾಲಿಟ್ಟಿದೆ. ಶಿರಸಿ ಕುಮಟಾ ಹೆದ್ದಾರಿ ಕಾಮಗಾರಿ ನೀರೀಕ್ಷೆಯಂತೆ 2025 ಡಿಸೆಂಬರ್ ಗೆ ಮುಗಿಯಲಿಲ್ಲ. ಹಾಗೂ ಬಸ್ ಸಂಚಾರ ಆರಂಭವಾಗಲಿಲ್ಲ. ಇನ್ನು ಮಳೆಗಾಲದಲ್ಲಿ ಒಂದೆರಡು ಕಡೆ ಭೂಕುಸಿತವಾದದ್ದು ಹಾಗೂ ಒಂದೆರಡು ದಿನ ಸ್ವಲ್ಪ ಮಟ್ಟಿಗೆ ನೆರೆ ಕಾಣಿಸಿಕೊಂಡಿತು. ಕಾರವಾರ , ಭಟ್ಕಳ ನಗರಗಳು ಮಹಾಮಳೆ ಕಂಡವು. ಹೆಚ್ಚಿನ ಹಾನಿ ಸಂಭವಿಸಲಿಲ್ಲ. ಇನ್ನು ವನ್ಯಜೀವಿ ಮತ್ತು ಮನವರ ನಡುವಿನ ಸಂಘರ್ಷ ಸಹ ಅಲ್ಪ ಮಟ್ಟಿಗೆ ದಾಖಲಾಯಿತು.  

*2025ರ ಪ್ರಮುಖ ಘಟನೆಗಳು :  

*" ಜಾನಪದ ಕೋಗಿಲೆಯ ಕಣ್ಮರೆ "*  

ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಫೆಬ್ರವರಿಯಲ್ಲಿ ನಿಧನರಾದರು. ಎಂಭತ್ತು ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಅವರು ಸಾರ್ಥಕ ಬದುಕು ನಡೆಸಿದರು. ಹಾಲಕ್ಕಿ ಜಾನಪದದ ನೆನಪಿನ ಕೋಶವಾಗಿದ್ದ ಅವರು ಹಾಲಕ್ಕಿಗಳ ಜಾನಪದ ಹಾಡುಗಳನ್ನು ಗಂಟೆಗಟ್ಟಲೆ ಹಾಡುತ್ತಿದ್ದರು. ಜನನ, ಜಾತ್ರೆ, ಹಬ್ಬ ಹುಣ್ಣುಮೆ, ಮದುವೆ, ಸುಗ್ಗಿ , ಸಂಭ್ರಮ, ಮರಣ ಹೀಗೆ ಹತ್ತು ಹಲವು ಸಂದರ್ಭ ಜಾನಪದ ಹಾಡುಗಳು ಅವರ ಜೋಳಿಗೆಯಲ್ಲಿದ್ದವು. ಹಾಲಕ್ಕಿ ರಾಮಾಯಣ , ಮಹಾಭಾರತದ ಕತೆಯನ್ನು ಹಾಡುಗಬ್ಬದಲ್ಲಿ ಹಾಡುತ್ತಿದ್ದರು. ಸಾರಾಯಿ ನಿಷೇಧ ಆಂದೋಲನ, ಅರಣ್ಯ ಹಕ್ಕು ಹೋರಾಟ ಸೇರಿದಂತೆ ಹಲವು ಸಾಮಾಜಿಕ ಆಯಾಮದ ಹೋರಾಟಗಳಲ್ಲಿ ಸುಕ್ರಜ್ಜಿ ಭಾಗವಹಿಸಿದ್ದರು. ಹಂಪಿ ಕನ್ನಡ ವಿವಿ ಸೇರಿದಂತೆ ನಾಡಿನ ಜಾನಪದ ಲೋಕ ಸುಕ್ರಜ್ಜಿಯನ್ನು ಗೌರವಿಸಿದ್ದವು. ಅವರ ಹಾಡುಗಳನ್ನು ರೆಕಾರ್ಡ್‌ ಮಾಡಿಕೊಂಡಿದ್ದವು. 2017ರಲ್ಲಿ ಅವರನ್ನು ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಕಸಾಪ ಗೌರವಿಸಿತ್ತು. ಆ ಸಮ್ಮೇಳನದಲ್ಲಿ ಅಧ್ಯಕ್ಷೆವಹಿಸಿ ಮಾತನಾಡಿದ್ದ ಸುಕ್ರಿ ಬೊಮ್ಮ ಗೌಡ ಅವರು ಕನ್ನಡ ಭಾಷೆ ಉಳುವಿಗೆ ಕನ್ನಡ ಶಾಲೆಗಳನ್ನು ರಕ್ಷಿಸಬೇಕು. ಶಾಲೆಗಳಿಗೆ ಪೂರ್ಣಪ್ರಮಾಣದ ಶಿಕ್ಷಕರ ನೇಮಕಾತಿ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದರು.*ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಈಡಿ ದಾಳಿ :*  

ಅದಿರು ಅಕ್ರಮ ಸಂಗ್ರಹ ಸಾಗಾಟ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಈಡಿ ದಾಳಿಯಾಯಿತು. ಅಪಾರ ಪ್ರಮಾಣದ ನಗದು,ಬಂಗಾರ ವಶಕ್ಕೆ ಪಡೆಯಲಾಯಿತು. ಬಂದರು ಅದಿರನ್ನು ಅಕ್ರಮ ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ , ಶಾಸಕರಿಗೆ ಏಳು ವರ್ಷ ಗಳ ಕಾಲದ ಕಾರಾಗೃಹ ಶಿಕ್ಷೆ ,ಕೆಲ ಕೋಟಿ ರೂ. ದಂಡ ವಿಧಿಸಿತು. ಆದರೆ ಹೈಕೋರ್ಟ್‌ ಈ ಜನಪ್ರತಿನಿಧಿಗಳ ಕೋರ್ಟ ನೀಡಿದ್ದ ತೀಪುಗೆ ತಡೆ ನೀಡಿ, ವಿಚಾರಣೆಯನ್ನು ಕಾಯ್ದಿರಿಸಿತು. ಹಾಗೂ ಅನಾರೋಗ್ಯ ಕಾರಣಕ್ಕಾಗಿ ಜಾಮೀನು ವಿಸ್ತರಿಸಿತು.   

*ರಸ್ತೆ ಸಂಚಾರ ಬಂದ್ :*  

ಮಳೆಗಾಲದಲ್ಲಿ ಅತೀಯಾದ ಮಳೆಗೆ ಗುಡ್ಡದ ಧರೆ ಕುಸಿದು ಕದ್ರಾ ಬಾಳೆಮನೆ ಕೊಡಸಳ್ಳಿ ನಡುವೆ ರಸ್ತೆ ಸಂಚರ 60 ದಿನಕ್ಕೂ ಹೆಚ್ಚು ಸಮಯ ಬಂದ್ ಆಗಿತ್ತು.  

*ನೂತನ ಆಸ್ಪತ್ರೆ ಕಟ್ಟಡ:*  

ಕಾರವಾರ ಮೆಡಿಕಲ್ ಕಾಲೇಜಿಗೆ ಸರ್ಕಾರ 400 ಹಾಸಿಗೆಯ ನೂತನ ಆಸ್ಪತ್ರೆಯನ್ನು 450 ಕೋಟಿಯಲ್ಲಿ ನಿರ್ಮಿಸಿಕೊಟ್ಟಿತು. ಜನರ ಅನುಕೂಲಕ್ಕಾಗಿ ಉದ್ಘಾಟನೆಗೆ ಮುನ್ನ ಹೊಸ ಆಸ್ಪತ್ರೆಯ ಕಟ್ಟಡವನ್ನು ರೋಗಿಗಳಿಗೆ ಬಳಸಿಕೊಳ್ಳಲಾಗಿದೆ.  

*ಉದ್ಘಾಟನೆಯಾಗದ ಪ್ರಜಾಸೌಧ :*  

ಕಾರವಾರದಲ್ಲಿ ಪ್ರಜಾಸೌಧವನ್ನು 33 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಪೂರ್ಣವಾಗಿದ್ದರೂ, ಲೋಕಾರೆ​‍್ಣ ಆಗಿಲ್ಲ. ಕಾರವಾರದಲ್ಲಿ ಪ್ರವಾಸಿ ಮಂದಿರ ಕಟ್ಟಿ ಉದ್ಘಾಟನೆಯಾದರೂ, ಜನ ಬಳಕೆಗೆ ಲಭ್ಯವಾಗದೆ ಬೀಗ ಹಾಕಿ ಇಡಲಾಗಿದೆ.   

*ಕೌಂಡಿನ್ಯ ಅರ್ಪಣೆ:*  

ಕೌಂಡಿನ್ಯ ಹೆಸರಿನ ಸಂಪ್ರದಾಯಿಕ ನೌಕೆಯನ್ನು ರಕ್ಷಣಾ ಸಚಿಬ ರಾಜನಾಥ ಸಿಂಗ್ ಅವರು ಕಾರವಾರದ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಸಿದರು.  

*ಸಬ್ ಮರೀನ್ ನಲ್ಲಿ ದ್ರೌಪದಿ :*

ದೇಶದ ಮೊದಲ ಮಹಿಳೆ ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕದಂಬ ನೌಕಾನೆಲೆಯಲ್ಲಿ ಸಬ್ ಮರೀನ್ ನಲ್ಲಿ ಪ್ರಯಾಣಿಸಿ ದಾಖಲೆ ಬರೆದರು.   

*ಪ್ರತಿಭಟನೆಗಳ ವರ್ಷ :* 

ಅಂಕೋಲಾದ ಕೇಣಿಯಲ್ಲಿ  ಬಂದರನ್ನು ಜೆಎಸ್ ಡಬ್ಲು ಅವರು ನಿರ್ಮಾಣಮಾಡುವುದು ಬೇಡ ಎಂದು ಪ್ರತಿಭಟನೆಗಳು ಜೋರಾಗಿ ನಡೆದವು. ಮೀನುಗಾರರು ಸಾರ್ವಜನಿಕ ಅಹವಾಲು ಸಭೆಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.   

*ಪಂಪ್ ಸ್ಟೋರೇಜ್ ಗೆ ವಿರೋಧ:* 

ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ವಿರುದ್ಧ ಪ್ರತಿಭಟನೆಗಳು ಜೋರಾಗಿ ನಡೆದವು. ಗೇರುಸೊಪ್ಪ ದಿಂದ ಪಂಪ್ ಮೂಲಕ ತಳಕಳಲೆ ಡ್ಯಾಂಗೆ ನೀರು ಒಯ್ದು ಮರು ಬಳಸಿ ವಿದ್ಯುತ್ ಉತ್ಪಾದನಾ ಯೋಜನೆಗೆ ವಿರೋಧ ದಾಖಲಾಯಿತು. ಕೇಂದ್ರ ಸರ್ಕಾರದ ಯೋಜನೆ ರಾಜ್ಯ ಸರ್ಕಾರ ಬೆಂಬಲಿಸುವ ಪ್ರಬಲ ಇಚ್ಚೆಯನ್ನು ಉಪ ಮುಖ್ಯಮಂತ್ರಿ  ಡಿಕೆಶಿ ಕಾರವಾರದಲ್ಲಿ ಡಿ. 28 ರಂದು  ಪ್ರಕಟಿಸಿದರು. 

*ನಿಲ್ಲದ ಅರಣ್ಯ ಅತಿಕ್ರಮಿತ ರೈತರ ಹೋರಾಟ:*  

ಅರಣ್ಯ ಅತಿಕ್ರಮಣದಾರರು ತಮ್ಮ ಭೂಮಿ ಹಕ್ಕಿಗಾಗಿ ಡಿ.6 ರಂದು ಕಾರವಾರದಲ್ಲಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು. ಸಾವಿರಾರು ಜನ ಭೂಮಿ ಹಕ್ಕಿಗೆ ಮರು ಅರ್ಜಿ ಸಲ್ಲಿಸಿದರು.  

*ವರದಾ ಬೇಡ್ತಿ ನದಿ ಜೋಡಣೆಗೆ ಡಿಪಿಆರ್‌:*  

ವರದಾ ಬಡ್ತಿ ನದಿ ಜೋಡಣೆಗೆ  ಕೇಂದ್ರ ಸರ್ಕಾರದ ಆಶಯದಂತೆ , ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಡಿಪಿಆರ್ ಸಿದ್ದಪಡಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರವಾರದಲ್ಲಿ ಡಿ.28 ರಂದು ಪ್ರಕಟಿಸಿದರು. ವರದಾ ಬೇಡ್ತಿ ನದಿ ತಿರುವು ಜೋಡಣೆಯನ್ನು   ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರೆ, ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರೋಧಿಸಿದರು. ವೇದಾವತಿ ಅಘನಾಶಿನಿ ನದಿ ಜೋಡಣೆಗೆ ಸಹ ಅಪಸ್ವರ ಕೆಲವರಿಂದ ಮಾತ್ರ  ಕೇಳಿ ಬಂದಿದೆ . 

*ಮಾಜಿ ಸದಸ್ಯನ ಹತ್ಯೆ:* 

ಕಾರವಾರ  ನಗರಸಭೆಯ ಮಾಜಿ ಸದಸ್ಯ ಸತೀಶ್ ಕೊಳಂಕರ್ ಅವರನ್ನು ಕಾರವಾರದ ಬಿಎಸ್ ಎನ್ ಎಲ್ ಕಚೇರಿ ಎದುರು ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಈ ಘಟನೆ ಕಾರವಾರವನ್ನು ಬೆಚ್ಚಿ ಬೀಳಿಸಿತು.

*ಆರೋಪಿಗಳಿಗೆ ಗುಂಡೇಟಿನ ವರ್ಷ:*  

ಜಿಲ್ಲೆಯಲ್ಲಿನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ , ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡೇಟು ನೀಡಿ ಪೊಲೀಸರು ಬಿಸಿ ಮುಟ್ಟಿಸಿದರು. ಹೊನ್ನಾವರ ಬಳಿ ಗರ್ಭಧರಿಸಿದ ಗೋ ಹತ್ಯೆ ಮಾಡಿದ ಆರೋಪಿಗಳಲ್ಲಿ ಓರ್ವ ಯುವಕ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ನಗರಸಭೆಯ ಮಾಜಿ ಸದಸ್ಯ ಸತೀಶ್ ಕೊಳಂಬಕರ್ ಅವರ ಹತ್ಯೆಯ ಒಬ್ಬ ಆರೋಪಿ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ನಿತೇಶ್ ತಾಂಡೇಲ ಕಾಲಿಗೆ ಗುಂಡು ಹಾರಿಸಿದ್ದರು. ಯಲ್ಲಾಪುರ ಅಂಕೋಲಾ ಮಧ್ಯ ರಾಮಗುಳಿ ಬಳಿ ಕೆಟ್ಟು ನಿಂತಿದ್ದ ಕಾರನಲ್ಲಿದ್ದ ಹಣ ಅಪಹರಣ ಘಟನೆಯಲ್ಲಿ ಓರ್ವ ಆರೋಪಿಯನ್ನು ಮುಂಬಯಿನಿಂದ ( ಮಂಗಳೂರು ಕಡೆಯವ)ಕರೆತರುವಾಗ ಭಗವತಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ಜೊಯಿಡಾ ರಾಮಗನರದ ರೌಡಿ ಶೀಟರ್ ಗೆ ಹಾಗೂ ದಾಂಡೇಲಿಯ ಬೈಲಪಾರ ಕಡೆ ವೃದ್ಧಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗೆ ,ಮುಂಡಗೋಡ ಉದ್ಯಮಿ ಅಪಹರಣದ ಆರೋಪಿಗಳಲ್ಲಿ ಓರ್ವನಿಗೆ ಗುಂಡೇಟು ನೀಡಿ, ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದರು. 

*ಕಾರಾಗೃಹದಲ್ಲಿ ಗಲಾಟೆ :* 

ಕಾರವಾರ ಕೇಂದ್ರ ಕಾರಾಗೃಹದಲ್ಲಿ ಗಾಂಜ ಸಿಗದ ಕಾರಣ ಇಬ್ಬರು ರೌಡಿಗಳು ಜೈಲಿನ ಸಿಬ್ಬಂದಿಗೆ ಥಳಿಸಿದ ಘಟನೆ ಡಿಸೆಂಬರ್ ನಲ್ಲಿ ದಾಖಲಾಯಿತು. ಇದೇ ತಿಂಗಳಲ್ಲಿ ವಿಚಾರಣಾಧೀನ ಕೈದಿಗಳಿಂದ ಎರಡು ಮೊಬೈಲ್ ಕಾರಾಗೃಹದಲ್ಲಿ ವಶವಾದವು.  

* ಕರಾವಳಿ ಉತ್ಸವವನ್ನು ಹತ್ತು ಕೋಟಿ ರೂ. ವೆಚ್ಚದಲ್ಲಿ ಏಳು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು. ಬಾಲಿವುಡ್ ಹಲ,ಸ್ಯಾಂಡಲ್ ವುಡ್ ಗಾಯಕರು ಕಾರವಾರಕ್ಕೆ ಆಗಮಿಸಿ ಲಕ್ಷಾಂತರ ಜನರನ್ನು ರಂಜಿಸಿದರು. ಗಾಯಕರಾದ ರಾಜೇಶ್ ಕೃಷ್ಣನ್, ಸಂತೋಷ, ರವಿರಾಜ, ಮಾನಸ ಹೊಳ್ಳ, ಪುಷ್ಪಾ ಅಆರಾಧ್ಯ ತಂಡ, ಗುರುಕಿರಣ್ ತಂಡ ಕನ್ನಡ ಗೀತೆಗಳ ಲೋಕವನ್ನು ಧರೆಗೆ ಇಳಿಸಿದರು. ಮಹಮ್ಮದ್ ದಾನೇಶ್, ಶಂಕರ್ ಮಹಾದೇವನ್, ರಾ​‍್ತರ್ ವೈವಿಧ್ಯಮಯ ಸಂಗೀತವನ್ನು ಯುವ ಜನತೆಗೆ ನೀಡಿದರು.