ಬೆಳಗಾವಿ ಸುವರ್ಣಸೌಧ ಡಿ.19: ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಖಾಲಿಯಿರುವ 4,882 ಪ್ರಾಥಮಿಕ ಹಾಗೂ 385 ಪ್ರೌಢ ಶಿಕ್ಷಕರು ಸೇರಿ ಒಟ್ಟು 5,267 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರುಗಳ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ರಾಜ್ಯದಲ್ಲಿ 50,567 ಪ್ರಾಥಮಿಕ ಹಾಗೂ 9,705 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಸೇರಿ ಒಟ್ಟು 59,772 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಸರ್ಕಾರ 2022ರಲ್ಲಿ 15,000 ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಅರ್ಹತೆ ಪಡೆದ 13,352 ಅಭ್ಯರ್ಥಿಗಳ ಪೈಕಿ, 12,521 ಶಿಕ್ಷಕರಿಗೆ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಉಳಿದ ಶಿಕ್ಷಕರ ನೇಮಕಾತಿ ಬಗ್ಗೆ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೊಗಿದ್ದಾರೆ. ಸರ್ಕಾರಿ ಶಾಲೆಗಳು ಮಾತ್ರವಲ್ಲ ಅನುದಾನಿತ ಶಾಲೆಗಳಲ್ಲಿಯೂ ಶಿಕ್ಷಕರ ಹುದ್ದೆಗಳು ಖಾಲಿಯಿವೆ ಎಂದರು.
ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳಕ್ಕೆ ಕ್ರಮ:
ಶಾಲೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಯಾವುದೇ ಶಿಕ್ಷಕರನನ್ನು ನೇಮಿಸಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆಗಳಿಗೆ 35,000 ಹಾಗೂ ಪ್ರೌಢಶಾಲೆಗಳಿಗೆ 8,968 ಅಥಿತಿ ಶಿಕ್ಷಕರನ್ನು ನೇಮಿಸಲಾಗಿದೆ. ಸದ್ಯ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನ ಹೆಚ್ಚಿಸಲು ಮುಖ್ಯಮಂತ್ರಿಗಳು ಒಲವು ತೋರಿದ್ದು, ಶೀಘ್ರವೇ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವ ಎಸ್.ಮಧು ಬಂಗಾರ್ಪ ಭರವಸೆ ನೀಡಿದರು.
ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರಿಗೆ ಸದ್ಯ ರೂ.12,000 ಗೌರವ ಧನ ನೀಡಲಾಗುತ್ತಿದೆ. ಸರ್ಕಾರ ನಿಯಮಾನುಸಾರ ಕನಿಷ್ಠ ಕೂಲಿ ವೇತನವೇ ರೂ.18,000 ಇದೆ. ಎರಡು ಪದವಿ ಪಡೆದು ಉಪನ್ಯಾಸ ಮಾಡುವವರಿಗೆ ರೂ.12,000 ಗೌರವ ಧನ ನೀಡುವುದು ವಿಪರ್ಯಾಸ ಎನಿಸುತ್ತದೆ. ಸರ್ಕಾರ ಅತಿಥಿ ಪಿಯು ಉಪನ್ಯಾಸಕರಿಗೆ ರೂ.30,000 ಮಾಸಿಕ ಗೌರವಧನ ನೀಡುವಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್ ಸಚಿವರನ್ನು ಒತ್ತಾಯಿಸಿದರು.
ಬೆಂಗಳೂರಿನ ಮಹಾಲಕ್ಷ್ಮೀ ಲೇ ಓಟ್ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 20 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಕಳೆದ 3 ವರ್ಷಗಳಲ್ಲಿ 20 ಕೊಠಡಿಗಳಿಗೆ ರೂ.2.78 ಕೋಟಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಗೋಪಾಲಯ್ಯ.ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಎಸ್.ಮಧು ಬಂಗಾರ್ಪ ಸ್ಪಷ್ಟೀಕರಣ ನೀಡಿದರು. ಶಾಸಕ ಗೋಪಾಲಯ್ಯ.ಕೆ ಅವರ ಬದಲಿಗೆ, ಶಾಸಕ ಭೈರತಿ ಬಸವರಾಜ್ ಪ್ರಶ್ನೆಯನ್ನು ಸದನದಲ್ಲಿ ಸಚಿವರಿಗೆ ಕೇಳಿದರು.
ಸ್ಥಳೀಯ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಿಸಕೊಂಡು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಲು ಅನುಮತಿ ನೀಡುವಂತೆ ಶಾಸಕ ಜಿ.ಟಿ.ದೇವೇಗೌಡ ಸಚಿವರಲ್ಲಿ ಕೋರಿದರು.