ದೇಶಾದ್ಯಂತ ’ಯುಐ’ ಟಿಕೇಟ್ ಬುಕ್ಕಿಂಗ್ ನಲ್ಲಿ ದಾಖಲೆ ಡಿಸೆಂಬರ್ 20ರಂದು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ರೀಲೀಸ್ ಆಗಲಿರುವ ’ಯುಐ’ ದಾಖಲೆ ಮಟ್ಟದಲ್ಲಿ ಟಿಕೇಟ್ ಬುಕ್ಕಿಂಗ್ ಆಗುತ್ತಿದೆ. ಕನ್ನಡ ಸಿನಿಮಾಗಳಿಗೆ ಆನ್ ಲೈನ್ ಗಿಂತ ಆಪ್ ಲೈನ್ ಟಿಕೇಟ್ ಬುಕ್ಕಿಂಗ್ ಜಾಸ್ತಿಯಿರುತ್ತೆ. ಆದರೆ ’ಯುಐ’ ಸಿನಿಮಾದ ಆನ್ ಲೈನ್ ಟಿಕೇಟ್ ಶುರುವಾಗಿ ಅರ್ಧತಾಸಿನಲ್ಲಿ ಟಿಕೇಟ್ ಸೋಲ್ಡ್ ಓಟ್ ಆಗುತ್ತಿದ್ದು ’ಯುಐ’ ದೇಶಾದ್ಯಂತ ಕಲೆಕ್ಷನ್ ನಲ್ಲಿ ಹೊಸ ದಾಖಲೆ ನಿರ್ಮಿಸುವುದು ಖಚಿತವಾಗಿದೆ. ಈಗಾಗಲೇ ಹಾಡು, ವಾರ್ನರ್ ನಿಂದ ಯುಐ ಕ್ರೇಜ್ ಹೆಚ್ಚಾಗಿರುವುದು ವಿಶೇಷ. ಬಹಳ ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿದ್ದು, ಈ ಕಾರಣಕ್ಕೇ ಚಿತ್ರದ ಬಗ್ಗೆ ನೀರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಜಾತೀಯತೆ, ರಾಜಕೀಯ ನಾಯಕರ ಅಪ್ರಬುದ್ಧತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂಬ ಸುದ್ದಿ ಹಬ್ಬಿದೆ.
ಯುಐ ಸಿನಿಮಾದ ಪ್ರೀ-ರೀಲೀಸ್ ಈವೆಂಟ್ ನಿನ್ನೆ ಬೆಂಗಳೂರಿನ ಯುಬಿ ಸಿಟಿಯ ಜೆಡಬ್ಲ್ಯೂ ಮ್ಯಾರೇಟ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಹಲವರು ಆಗಮಿಸಿದ್ದರು. ಉಪ್ಪಿ ನಟಿಸಿ, ನಿರ್ದೇಶನ ಮಾಡಿರೋ ’ಯುಐ’ ಸಿನಿಮಾ, ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನೀರೀಕ್ಷೆ ಮೂಡಿಸಿರುವ ಚಿತ್ರವಾಗಿದೆ. ವಾರಗಳಿಂದ ಬಿರುಸಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡವು ಬೆಂಗಳೂರಿನಲ್ಲಿ ಅದ್ದೂರಿ ಈವೆಂಟ್ ಆಯೋಜನೆ ಮಾಡಿತ್ತು. ಈ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.
ಚಿತ್ರದ ಬಗ್ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಭಾರೀ ನೀರೀಕ್ಷೆ ಮನೆಮಾಡಿದೆ. ಕಾರಣ, ಉಪೇಂದ್ರ ಅವರು ಟ್ರೆಂಡ್ ಸೆಟ್ಟರ್ ನಿರ್ದೇಶಕ ಎಂಬುದು ಎಲ್ಲರಿಗೂ ಗೊತ್ತು. ಈ ಮೊದಲು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಓಂ, ಎ ಹಾಗೂ ಉಪೇಂದ್ರ ಸೇರಿದಂತೆ ಬಹಳಷ್ಟು ಚಿತ್ರಗಳು ಗಳಿಕೆ ಹಾಗೂ ಜನಪ್ರಿಯತೆಯಲ್ಲಿ ದಾಖಲೆ ನಿರ್ಮಿಸಿವೆ. ಒಟ್ಟಿನಲ್ಲಿ, ಇನ್ನೇನು ಮೂರು ದಿನದಲ್ಲಿ ಉಪ್ಪಿಯವರ ಯುಐ ಚಿತ್ರವು ತೆರೆಯಲ್ಲಿ ನೋಡಲು ಲಭ್ಯವಿದೆ. ಭಾರೀ ನೀರೀಕ್ಷೆಯ ಈ ಚಿತ್ರವನ್ನು ಕನ್ನಡ ಸೇರಿದಂತೆ ಎಲ್ಲ ಸಿನಿಮಾಪ್ರಿಯರು ಕಣ್ತುಂಬಿಕೊಂಡು ಆನಂದಿಸಬಹುದು. ಚಿತ್ರವು ಕಂಟೆಂಟ್ ಹಾಗು ಮೇಕಿಂಗ್ ಎರಡರಲ್ಲೂ ವಿಶೇಷವಾದ ಕ್ವಾಲಿಟಿ ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡಿದ ಮೇಲೆ ಸದ್ಯ ಹಬ್ಬಿರುವ ಎಲ್ಲಾ ಸುದ್ದಿಗಳ ಅಸಲಿಯತ್ತೇನು ಎಂಬುದು ಬಹಿರಂಗವಾಗಲಿದೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ’ಯುಐ’ ಚಿತ್ರವನ್ನು ಕೆ.ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ವಿಜಯ್ ರಾಜ್ ಸಂಕಲನ, ರವಿ ವರ್ಮ ಹಾಗೂ ಚೇತನ್ ಸಾಹಸವಿದೆ.