ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಸಿದ್ಧ: ಟ್ರಂಪ್

 ವಾಷಿಂಗ್ಟನ್, ಆ 21       ಏಷ್ಯಾದ ನೆರೆಹೊರೆ ರಾಷ್ಟ್ರಗಳ ನಡುವೆ "ಜಿಟಿಲ ಸಮಸ್ಯೆಗಳಿವೆ". ಇವುಗಳನ್ನು ಬಗೆಹರಿಸಲು ಸಹಾಯ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಕಾಶ್ಮೀರ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡವೆ ಮಧ್ಯಸ್ಥಿತಿಕೆ ವಹಿಸಲು ಅಮೆರಿಕ ಸಿದ್ಧವಿದೆ ಎಂಬ ಸೂಚನೆ ಸಿಕ್ಕಂತಾಗಿದೆ.  " ಕಾಶ್ಮೀರ ವಿಚಾರ ಬಹಳ ಜಟಿಲವಾದ ವಿಷಯವಾಗಿದೆ. ಈ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಬಳಿ ಮಾತನಾಡಿದ್ದೇನೆ. ಇವರಿಬ್ಬರು ನನಗೆ ಆತ್ಮಿಯರು. ಅವರಿಬ್ಬರು ಮಹಾನ್ ವ್ಯಕ್ತಿಗಳಾಗಿದ್ದು, ಅವರವರ ದೇಶದ ಮೇಲೆ ಅಗಾಧ ಪ್ರೀತಿ ಹೊಂದಿದ್ದಾರೆ ಎಂದು ಟ್ರಂಟ್ ಶ್ವೇತ ಭವನದಲ್ಲಿ ತಿಳಿಸಿದ್ದಾರೆ.  " ಫ್ರಾನ್ಸ್ ನಲ್ಲಿ ಆರಂಭವಾಗುವ ಜಿ-7 ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಾರಾಂತ್ಯದಲ್ಲಿ ಸಮಯ ಕಳೆಯಲಿದ್ದೇನೆ. ಈ ವೇಳೆ ಕಾಶ್ಮೀರ ಜಟಿಲ ಸಮಸ್ಯೆಯನ್ನು ತಿಳಿಗೊಳಿಸಲು ನಾವು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.   "ಆ ಎರಡು ದೇಶಗಳ ನಡುವೆ ಭಾರಿ ಸಮಸ್ಯೆಗಳಿವೆ ಮತ್ತು ತಾನು ಮಧ್ಯಸ್ಥಿಕೆ ವಹಿಸಲು ಅಥವಾ ಏನನ್ನಾದರೂ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಈ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ಮೋದಿ ಹಾಗೂ ಇಮ್ರಾನ್ ಇಬ್ಬರೂ ಸ್ನೇಹಿತರು ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದು ಆಂತರಿಕ ವಿಷಯವಾಗಿದೆ ಎಂದು ಯುಎನ್ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ವಿಷಯದ ಬಗ್ಗೆ ಮೂರನೇ ವ್ಯಕ್ತಿ ಮಧ್ಯಸ್ಥಿಕೆಯನ್ನು ಭಾರತ ವಿರೋಧಿಸಿತ್ತು. ಆದಾಗ್ಯೂ, ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಗಾಗಿ ಪ್ರಸ್ತಾಪಿಸಿದ ನಂತರ, ಭಾರತವು ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು. ಪ್ರಧಾನಿ ಮೋದಿ ಅವರು ಕಾಶ್ಮೀರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ ಎಂದು ಟ್ರಂಪ್ ಹೇಳಿರುವ ವಿವಾದಾತ್ಮಕ ಹೇಳಿಕೆಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಪ್ರಧಾನಿ ಮೋದಿ ಅವರು, ಅಮೆರಿಕ ಅಧ್ಯಕ್ಷರಿಗೆ ಅಂತಹ ಯಾವುದೇ ವಿನಂತಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.  "ಪಾಕಿಸ್ತಾನದೊಂದಿಗಿನ ಎಲ್ಲಾ ಬಾಕಿ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮಾತ್ರ ಚರ್ಚಿಸಲಾಗಿದೆ ಎಂಬುದು ಭಾರತದ ಸ್ಥಿರ ನಿಲುವು. ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆ ಅಥವಾ ಚರ್ಚೆ ನಡೆಸಬೇಕಾದರೆ, ಪಾಕ್ ಗಡಿಯಾಚೆಗಿನ ಎಲ್ಲ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕಾಗುತ್ತದೆ "ಎಂದು ಡಾ ಜೈಶಂಕರ್ ಹೇಳಿದ್ದರು.