ಚನ್ನಮ್ಮನ ಕಿತ್ತೂರು 05: ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಹೊರಬಂದು ಸತತ ಪರಿಶ್ರಮ, ಶೃದ್ಧೆ, ಆತ್ಮ ವಿಶ್ವಾಸದಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕಿತ್ತೂರ ನಾಡ ವಿದ್ಯಾ ವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಂಗಳವಾರ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮತನಾಡಿ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಓದಬೇಕು.ಸಾಧನೆಗೆ ಜಾತಿ, ಭಾಷೆ, ಬಡವ-ಶ್ರೀಮಂತ ಯಾವದೇ ಬೇಧ ಭಾವನೆಗಳಿರುವದಿಲ್ಲ. ನಿರ್ಧಿಷ್ಟ ಗುರಿ ಹೊಂದಿ ಕ್ರಿಯಾಶೀಲರಾದರೆ ಸಾಧನೆ ಸಲೀಸಾಗುತ್ತದೆ.ವಿದ್ಯಾರ್ಥಿಗಳು
ಕಲಿತ ಮಹಾವಿದ್ಯಾಲಯ,ಕಲಿಸಿದ ಶಿಕ್ಷಕರನ್ನು,ಕೂಡಿ ಕಲಿತ ಸ್ನೇಹಿತರನ್ನು ಎಂದಿಗೂ ಮರೆಯಬಾರದು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಂ.ಎಸ್.ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಪಿ.ಯು.ಸಿ.ನಂತರ ಓದನ್ನು ನಿಲ್ಲಿಸದೆ ಪದವಿ ಶಿಕ್ಷಣವನ್ನು ಮುಂದುವರೆಸುವಂತೆ ಸೂಚಿಸಿದರು. ವಿದ್ಯಾರ್ಥಿಗಳಾದ ಭಾಗ್ಯಾ ಭಸ್ಕರಿ,ಸ್ವಾತಿ ಬಾಳೇಕುಂದರಗಿ,ಈರಣ್ಣ ಹವಾಲ್ದಾರ ಮತ್ತು ಮಹಾಂತೇಶ ಬೆಣಚಿನಮರಡಿ ಮಾತನಾಡಿ ಎರಡು ವರ್ಷಗಳವರೆಗೆ ಮಹಾವಿದ್ಯಾಲಯದಲ್ಲಿ ಓದಿದ ಅನುಭವಗಳನ್ನು ಹಂಚಿಕೊಂಡು ಮಹಾವಿದ್ಯಾಲಯದ ಬಗೆಗೆ ಅಭಿಮಾನದ ನಮನಗಳನ್ನು ಸಲ್ಲಿಸಿದರು. ಉಪನ್ಯಾಸಕರಾದ ಎನ್.ಜಿ.ಪಾಟೀಲ,ಶೈಲಾ ಪೂಜೇರ ಮತ್ತು ಸಿ.ಏಂ.ದಡ್ಡೀಕರ ಮಾತನಾಡಿ ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಸಾಂಸ್ಕೃತಿಕ ವಿಭಾಗದ ಚೇರಮನ್ನರಾದ ಸಿ.ಎಂ.ಗರಗದ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಎ.ಕೆ.ಮರಾಠೆ ವಂದಿಸಿದರು.ಎಂ.ಎನ್.ತಿಗಡಿ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.