ಲೋಕದರ್ಶನ ವರದಿ
ರಾಯಬಾಗ 09: ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ 5-6 ಮನೆಗಳಲ್ಲಿ ಕಳ್ಳರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿ ಎರಡು ಬೈಕ್ಗಳೊಂದಿಗೆ ಹಣ, ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ರವಿವಾರ ನಸುಕಿನ ಜಾವ ನಡೆದಿದೆ.
ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ ಮನೆಗಳ ಮಾಲೀಕರು ತಮ್ಮ ಮನೆಗಳಿಗೆ ಬೀಗ ಹಾಕಿ ಪರಊರಿಗೆ ಹೋಗಿದ್ದನ್ನು ಖಚಿತಪಡಿಸಿಕೊಂಡಿರುವ ಕಳ್ಳರು, ರವಿವಾರ ನಸುಕಿನ ಜಾವ ಮನೆಗಳ ಬೀಗ ಒಡೆದು, ಮನೆಯಲ್ಲಿನ ಟ್ರೇಜರಿಗಳಲ್ಲಿ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕಿದ ಹಣ ಮತ್ತು ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಮನೆಗಳ ಹೊರಗೆ ನಿಲ್ಲಿಸಿದ್ದ ಎರಡು ಬೈಕ್ಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಮನೆ ಮಾಲೀಕರು ಇಲ್ಲದ ಕಾರಣ ಎಷ್ಟು ಹಣ, ಬಂಗಾರ ಕಳ್ಳತನವಾಗಿದೆ ಎಂದು ತಿಳಿದು ಬಂದಿಲ್ಲ. ಬೆಳಗಿನ ಜಾವ ಅಕ್ಕಪಕ್ಕದ ಜನರು ಬೀಗ ಮುರದಿದ್ದು ನೋಡಿದ ನಂತರ ಕಳ್ಳತನವಾಗಿರುವ ವಿಷಯ ಬೆಳಕಿಗೆ ಬಂದಿದೆ. ರಾಯಬಾಗ ಶಾಸಕರ ಮನೆ ಹತ್ತಿರದ ಮನೆಗಳಲ್ಲಿ ಕಳ್ಳತನವಾಗಿದ್ದರಿಂದ ಪಟ್ಟಣದಲ್ಲಿ ಸುರಕ್ಷಿತದ ಬಗ್ಗೆ ಚರ್ಚಾ ವಿಷಯವಾಗಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಕೆ.ಎಸ್.ಹಟ್ಟಿ, ಪಿಎಸ್ಐ ಗಜಾನನ ನಾಯಿಕಅವರು ಸ್ಥಳ ಪರೀಶಿಲನೆ ನಡೆಸಿ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿದ್ದು, ಕಳ್ಳರ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆಎಂದು ತಿಳಿಸಿದರು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಅಧಿಕಾರಿಗಳು ಪಟ್ಟಣದ ನಾಗರೀಕರಿಗೆ ತಿಳಿಸಿದ್ದಾರೆ.
ರವಿವಾರದಿಂದ ತಾಲೂಕಿನ ಚಿಂಚಲಿ ಮಾಯಕ್ಕದೇವಿ ಜಾತ್ರೆ ಪ್ರಾರಂಭವಾಗಿದ್ದು, ಇದೇ ಸಂದರ್ಭದಲ್ಲಿ ಸರಣಿ ಕಳ್ಳತನವಾಗಿದ್ದು. ಭಕ್ತರ ಮಾರುವೇಶದಲ್ಲಿ ಜಾತ್ರೆಗೆ ಬರುವವರು ಕಳ್ಳತನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕಳೆದ 2-3 ದಿನಗಳಿಂದ ಪಟ್ಟಣದಲ್ಲಿ ಭೀಕ್ಷೆ ಬೇಡುವ ನೆಪದಲ್ಲಿ ಮಹಿಳೆಯರು ಮತ್ತು ಪುರುಷರು ತಿರುಗಾಡುತ್ತಿದ್ದು, ಅವರು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರೂ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು.