ಕ್ರೈಸ್ಟ್‌ಚರ್ಚ್, ಫೆ 28 : ನ್ಯೂಜಿಲೆಂಡ್ ವಿರುದ್ಧ ನಾಳೆ ನಡೆಯುವ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಿದ್ದವಾಗುತ್ತಿದೆ. ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿಅವರು ರವಿಚಂದ್ರನ್ ಅಶ್ವಿನ್ ಅವರು ಬ್ಯಾಟಿಂಗ್ ನಲ್ಲಿ ಸುಧಾರಣೆ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದರು. ಹಾಗಾಗಿ, ಅವರ ಸ್ಥಾನಕ್ಕೆ ನಾಳಿನ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ,” ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಅವರ ಬಗ್ಗೆ ನಾಳೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಶ್ವಿನ್ ವಿಶ್ವ ದರ್ಜೆಯ ಬೌಲರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಾಳಿನ ಪರಿಸ್ಥಿತಿಗಳನ್ನು ಆಧರಿಸಿ ಅಂತಿಮ 11 ನಿರ್ಧರಿಸುತ್ತೇವೆ. ಅವರು ಕಳೆದ ವರ್ಚಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಆದರೆ, ಅವರ ಬ್ಯಾಟಿಂಗ್‌ನಿಂದ ನಮಗೆ ಬೇಸರವಾಗಿದೆ. ಅವರು ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕು,’’ ಎಂದು ಸಲಹೆ ನೀಡಿದರು.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ವೃದ್ದಿಮನ್ ಸಾಹ ಅವರ ಜಾಗದಲ್ಲಿ ರಿಷಭ್ ಪಂತ್ ಅವರಿಗೆ ಅವಕಾಶ ನೀಡಿದ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,” ವೃದ್ದಿಮನ್ ಸಾಹ ಅವರಿಗೆ ಆಡಿಸುವ ಆಲೋಚನೆ ಇತ್ತು. ಆದರೆ, ಬೇರೆ ಸ್ಥಳಗಳಿಗಿಂತ ಇಲ್ಲಿ ವಿಕೆಟ್ ಹೆಚ್ಚಿನ ಚಲನೆಯನ್ನು ಹೊಂದಿದೆ ಹಾಗೂ ವೇಗಿಗಳಿಗೆ ಸ್ನೇಹಿಯಾಗಿದೆ. ಇಲ್ಲಿನ ವೆಲ್ಲಿಂಗ್ಟನ್ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗುವುದು ತುಂಬಾ ವಿರಳ. ಆದ್ದರಿಂದ ರಿಷಭ್ ಪಂತ್ ಗೆ ಮಣೆಹಾಕಲಾಯಿತು. ಪಂತ್ ಆಕ್ರಮಣಕಾರಿ ಬ್ಯಾಟ್ಸ್ ಮನ್ ಆಗಿದ್ದರಿಂದ ಅವರನ್ನು ಅವರಿಗೆ ವೇಗಿಗಳ ಸ್ನೇಹಿ ಪಿಚ್ ನಲ್ಲಿ ಸೂಕ್ತವಾಗಬಹುದು ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಲಾಯಿತು,’’ ಎಂದು ರವಿ ಶಾಸ್ತ್ರಿ ಹೇಳಿದರು.
ಗುರುವಾರ ಅಭ್ಯಾಸದ ವೇಳೆ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ಗಾಯಗೊಂಡಿದ್ದರು. ಆದರೆ, ಅವರು ನಾಳೆ ಕಣಕ್ಕೆ ಇಳಿಯಲಿದ್ದಾರೆಂದು ರವಿಶಾಸ್ತ್ರಿ ಸ್ಪಷ್ಟಪಡಿಸಿದರು. ಜತೆಗೆ, ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ಖಂಡಿತ ಈ ಪಂದ್ಯದಲ್ಲಿ ಪುಟಿದೇಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.