ಮಹಾಲಿಂಗಪುರ 14: ಪಂಚಮಸಾಲಿ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ 2 ಎ ಮೀಸಲಾತಿ ಸಿಗದೇ ಹೋದರೆ, 2028 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಅನುಕೂಲವಾಗುವ ಸರ್ಕಾರವನ್ನು ಚುನಾಯಿಸಿ ಮೀಸಲಾತಿಯನ್ನು ಪಡೆದೆ ಪಡೆಯುತ್ತೇವೆ ಎಂದು ಭಾಜಪ ಪಕ್ಷದ ಹಿರಿಯ ಮುಖಂಡ ಪಂಡಿತ ಪೂಜಾರ ಹೇಳಿದರು.
ಶುಕ್ರವಾರ ಸಮೀಪದ ರನ್ನ ಬೆಳಗಲಿ ಪಟ್ಟಣದಲ್ಲಿ ಬೆಳಗಾವಿ ಘಟನೆ ಖಂಡಿಸಿ ರಸ್ತಾರೋಖೋ ಪ್ರತಿಭಟನೆ ನಡೆಸಿ, ಸ್ಥಳೀಯ ಪಂಚಮಸಾಲಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಂಚಮಸಾಲಿ ಸಮಾಜದಲ್ಲಿ ಸಣ್ಣ ರೈತರು, ಕಡು ಬಡವರು ಮತ್ತು ಕೂಲಿ ಕಾರ್ಮಿಕರಿದ್ದಾರೆ.ಇವರ ಆರ್ಥಿಕ ಸ್ಥಿತಿ ಅಷ್ಟೆನೂ ಉತ್ತಮವಾಗಿಲ್ಲ.ಇಂತಹ ದಯನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಈ ವರ್ಗದ ಮಕ್ಕಳಿಗೆ ಉನ್ನತ ವ್ಯಾಸಂಗ ಸಹ ಮರಿಚಿಕೆಯಾಗಿದೆ.
ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಸಮಾಜದ ಆರ್ಥಿಕ ಅಭಿವೃದ್ಧಿಯ ಪ್ರಶ್ನೆ ಈಗಿನ ಯುವ ಸಮೂಹದ ಮೇಲೆಯೇ ನಿಂತಿದೆ. ಇದನ್ನು ಗಮನಿಸಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಶ್ರೀಗಳು ನಾಲ್ಕು ವರ್ಷಗಳ ಹಿಂದೆ ಈ ಹೋರಾಟವನ್ನು ಹುಟ್ಟುಹಾಕಿದ್ದಾರೆ. ಇದು ಸಂವಿಧಾನ ಬದ್ಧ ಹಕ್ಕು, ಯಾರದೋ ಹಕ್ಕು ಮೊಟಕುಗೊಳಿಸಿ ಕೇಳುತ್ತಿಲ್ಲ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮುಂದುವರಿಸಿದ್ದೇವೆ ಇದನ್ನು ಪಡೆದೆ ತೀರುತ್ತೇವೆ ಎಂದರು.
ಯುವ ಧುರೀಣ ಸಿದ್ದುಗೌಡ ಪಾಟೀಲ್ ಮಾತನಾಡಿ, ಶ್ರೀಗಳ, ಹೋರಾಟಗಾರರ ಮೇಲೆ ಆಗಿರುವ ಪೊಲೀಸ್ ದೌರ್ಜನ್ಯಕ್ಕೆ ಸರ್ಕಾರ ಕ್ಷಮೆಯಾಚಿಸಬೇಕು ಸಂಬಂಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ರಾಜ್ಯಪಾಲರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಶಿವನಗೌಡ ಪಾಟೀಲ, ಈರ್ಪ ಕಿತ್ತೂರ, ಹಣ್ಮಂತ ಶಿರೋಳ, ಸಿದ್ದು ಸಾಂಗ್ಲೀಕರ, ಮಹಾಲಿಂಗಪ್ಪ ಪುರಾಣಿಕ, ದುಂಡಪ್ಪ ಯಡಹಳ್ಳಿ, ಮಹಾಲಿಂಗಪ್ಪ ಹಿಕಡಿ, ಮಹಾಲಿಂಗಪ್ಪ ಹಿಪ್ಪರಗಿ, ಅನೀಲ ದೊಡಹಟ್ಟಿ, ಧರೆಪ್ಪ ಹಿಪ್ಪರಗಿ, ಸುರೇಶ್ ಹಿಪ್ಪರಗಿ, ರಾಮನಗೌಡ ಪಾಟೀಲ್, ಪ್ರಕಾಶ್ ಕೊನ್ನೂರ್ ಇದ್ದರು.