ರಣಜಿ ಟ್ರೋಫಿ: 4 ವಿಕೆಟ್ ಕಳೆದುಕೊಂಡು ಹಿನ್ನಡೆ ಭೀತಿಯಲ್ಲಿ ಮಧ್ಯ ಪ್ರದೇಶ

ಶಿವಮೊಗ್ಗ, ಫೆ 6, ಕರ್ನಾಟಕ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಮಧ್ಯ ಪ್ರದೇಶ ತಂಡ ರಣಜಿ ಟ್ರೋಫಿ ಎಲೈಟ್‌ ಎ ಮತ್ತು ಬಿ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕರ್ನಾಟಕ ವಿರುದ್ಧ ಹಿನ್ನಡೆ ಭೀತಿಗೆ ಸಿಲುಕಿದೆ. ಇಲ್ಲಿನ ಜವಾಹರ್ ಲಾಲ್ ನೆಹರು ಮೈದಾನದಲ್ಲಿ ಗುರುವಾರ ಎರಡು ವಿಕೆಟ್ ಕಳೆದುಕೊಂಡು 60 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಪ್ರವಾಸಿ ಮಧ್ಯ ಪ್ರದೇಶ ತಂಡ ಮಧ್ಯಾಹ್ನ ಭೋಜನ ವಿರಾಮದ ವೇಳೆಗೆ 68 ಓವರ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು 152 ರನ್ ದಾಖಲಿಸಿದ್ದು, ಇನ್ನೂ 274 ರನ್ ಗಳಿಸಬೇಕಿದೆ.

ಇಂದು ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಯಶ್ ದುಬೆ ಹಾಗೂ ಶುಭಂ ಶರ್ಮಾ ಜೋಡಿ ಅತ್ಯುತ್ತಮ ಬ್ಯಾಟಿಂಗ್ ಮಾಡಿತ್ತು. ಈ ಜೋಡಿ 63 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 159  ಎಸೆತಗಳಲ್ಲಿ 45 ರನ್ ಗಳಿಸಿ ತಾಳ್ಮೆಯ ಬ್ಯಾಟಿಂಗ್ ಯಶ್ ದುಬೆ ಅವರನ್ನು ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆ ಮೂಲಕ ದುಬೆ ಮತ್ತು ಶುಭಂ ಜೋಡಿಯನ್ನು ಬೇರ್ಪಡಿಸಿದರು.73 ಎಸೆತಗಳಲ್ಲಿ 28 ರನ್ ಗಳಿಸಿ ಯಶ್ ದುಬೆಗೆ ಸಾಥ್ ನೀಡುತ್ತಿದ್ದ ಶುಭಂ ಶರ್ಮಾ ಅವರನ್ನು ಕೆ.ಗೌತಮ್ ಔಟ್ ಮಾಡಿದರು. ನಂತರ, ಜತೆಯಾದ ಆದಿತ್ಯ ಶ್ರೀವಾತ್ಸವ ಮತ್ತು ವೆಂಕಟೇಶ್‌ ಅಯ್ಯರ್ ಜೋಡಿ ಕರ್ನಾಟಕದ ಬೌಲರ್‌ಗಳನ್ನು ಸದ್ಯ ಎದುರಿಸುತ್ತಿದ್ದಾರೆ. ಶ್ರೀವಾತ್ಸವ 48 ಎಸೆತಗಳಲ್ಲಿ 28 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇವರ ಜತೆ ಮತ್ತೊಂದು ತುದಿಯಲ್ಲಿ ಅಯ್ಯರ್(8) ಇದ್ದಾರೆ.

ಇದಕ್ಕೂ ಮುನ್ನ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 132 ಓವರ್‌ಗಳಿಗೆ 426 ರನ್ ಗಳಿಸಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರ್. ಸಮರ್ಥ್ 108 ರನ್, ಕೆ.ಗೌತಮ್ 82 ರನ್‌ ಹಾಗೂ ಶ್ರೇಯಸ್ ಅಯ್ಯರ್ 50 ರನ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ)

ಕರ್ನಾಟಕಪ್ರಥಮ ಇನಿಂಗ್ಸ್: 426

ಮಧ್ಯ ಪ್ರದೇಶ ಪ್ರಥಮ ಇನಿಂಗ್ಸ್: 68 ಓವರ್‌ಗಳಿಗೆ 152/4 (ಯಶ್ ದುಬೆ 45, ಆದಿತ್ಯ ಶ್ರೀವಾತ್ಸವ ಔಟಾಗದೆ 28; ಕೆ.ಗೌತಮ್ 13 ಕ್ಕೆ 3, ಶ್ರೇಯಸ್ ಗೋಪಾಲ್ 25 ಕ್ಕೆ 1)