ಕೊಂಚಗೇರಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಬೇಡಿಕೆ

ಕೊಂಚಗೇರಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಬೇಡಿಕೆ Demand for a permanent solution to the water problem in Konchageri

ಸಿರಿಗೇರಿ 03 :  ಸಿರುಗುಪ್ಪ ತಾಲೂಕು ಸಿರಿಗೇರಿ ಹೋಬಳಿಯ ಕೊಂಚಗೇರಿ ಗ್ರಾಮದಲ್ಲಿ ತುರ್ತು ಸಂದರ್ಭಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ತಪ್ಪಿಸಲು ಕನಿಷ್ಠ ಎರಡು ಕೈಪಂಪುಗಳನ್ನು ಸ್ಥಾಪಿಸುವಂತೆ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಪ್ರಸ್ತುತ ದಿನನಿತ್ಯದ ನೀರಿನ ಪೂರೈಕೆ ಸಂಪೂರ್ಣವಾಗಿ ವಿದ್ಯುತ್ ಚಾಲಿತ ಬೋರ್ವೆಲ್ಗಳ ಮೇಲೆ ಅವಲಂಬಿತವಾಗಿದೆ. ಸಾಮಾನ್ಯ ದಿನಗಳಲ್ಲಿ ನೀರಿನ ಸರಬರಾಜು ನಡೆಯುತ್ತಿದ್ದರೂ, ವಿದ್ಯುತ್ ವ್ಯತ್ಯಯ ಉಂಟಾದಾಗ ಅಥವಾ ಬೋರ್ವೆಲ್ಗಳು ದೋಷಗೊಂಡಾಗ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಕಳೆದ ವಾರ ಮಳೆ ಹಾಗೂ ಬಿರುಗಾಳಿ ಪರಿಣಾಮವಾಗಿ ಹಲವೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿಬಿದ್ದಿದ್ದು, ವಿದ್ಯುತ್ ಸಂಪರ್ಕ ಎರಡು ಮೂರು ದಿನಗಳ ಕಾಲ ಸ್ಥಗಿತಗೊಂಡಿತ್ತು.  

ಈ ಅವಧಿಯಲ್ಲಿ ಬೋರ್ವೆಲ್ಗಳು ಕಾರ್ಯನಿರ್ವಹಿಸದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿ, ಜನರು ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಆಗಾಗ ವಿದ್ಯುತ್ ವ್ಯತ್ಯಯ ಸಂಭವಿಸುವುದು ಹಾಗೂ ಕೆಲವೊಮ್ಮೆ ಬೋರ್ವೆಲ್ಗಳು ಕೆಟ್ಟುಹೋಗುವುದರಿಂದ ದಿನಗಟ್ಟಲೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆಯಾಗಿ ಕೈಪಂಪುಗಳು ಅತ್ಯಂತ ಅಗತ್ಯವಾಗಿವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಗ್ರಾಮದಲ್ಲಿ ಕನಿಷ್ಠ ಎರಡು ಅಥವಾ ಮೂರು ಕೈಪಂಪು ಬೋರ್ಗಳನ್ನು ಕೊರೆಸಿ ಸಾರ್ವಜನಿಕ ಬಳಕೆಗೆ ಒದಗಿಸುವ ಮೂಲಕ ತುರ್ತು ಸಂದರ್ಭಗಳಲ್ಲಿ ನೀರಿನ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಗ್ರಾಮಾಡಳಿತವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.