ಬೆಂಗಳೂರು, ಫೆ.13 : ಭರವಸೆ ಆಟಗಾರ ಅಭಿಮನ್ಯು ಮಿಥುನ್ (40) ಹಾಗೂ ಎಸ್ ಶರತ್ (34) ಇವರುಗಳ ಸಮಯೋಚಿತ ಆಟದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ವಿರುದ್ಧ 148 ರನ್ ಗಳ ಮುನಡೆ ಸಾಧಿಸಿದೆ.
ಗುರುವಾರ ಏಳು ವಿಕೆಟ್ ನಷ್ಟಕ್ಕೆ 165 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ 233 ರನ್ ಗಳಿಗೆ ಆಲೌಟ್ ಆಯಿತು. ಬುಧವಾರ 9 ರನ್ ಗಳಿಸಿದ್ದ ಅಭಿಮನ್ಯು ಮಿಥುನ್ ಬಿರುಸಿದ ಬ್ಯಾಟಿಂಗ್ ನಡೆಸಿದರು. ತಮ್ಮ ನೈಜ ಆಟ ಪ್ರದರ್ಶಿಸಿದ ಮಿಥುನ್ 46 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 40 ರನ್ ಸಿಡಿಸಿದರು.
ಉಳಿದಂತೆ ಎಸ್ ಶರತ್ 6 ಬೌಂಡರಿ ಸೇರಿದಂತೆ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಬರೋಡಾ ಪರ ಸೊಯೆನ್ ಸೊಪಾರಿಯಾ ಐದು ವಿಕೆಟ್ ಕಬಳಿಸಿದರು. ಅಭಿಮನ್ಯು ಸಿಂಗ್ ರಜಪುತ್ ಹಾಗೂ ಭಾರ್ಗವ್ ಭಟ್ ತಲಾ ಎರಡು ವಿಕೆಟ್ ಪಡೆದರು.