ನವದೆಹಲಿ, ಜ.29 : ಆರಂಭಿಕ್ ದೇವದತ್ ಪಡಿಕ್ಕಲ್ (55) ಹಾಗೂ ಎಸ್.ಶರತ್ (ಅಜೇಯ 56) ಇವರುಗಳ ಭರ್ಜರಿ ಅರ್ಧಶತಕದ ಬಲದಿಂದ ಕರ್ನಾಟಕ ರಣಜಿ ಟೂರ್ನಿಯ ಎಲೈಟ್ “ಎ” ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಬುಧವಾರ ಮೊದಲ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ಗೆ 160 ರನ್ ಗಳಿಂದ ಆಟ ಮುಂದುವರಿಸಿ 182 ರನ್ ಗಳಿಗೆ ಆಲೌಟ್ ಆಯಿತು. ರೈಲ್ವೇಸ್ ತಂಡದ ಪರ ಅರಿಂದಮ್ ಘೋಷ್ 167 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿದರು. ಉಳಿದಂತೆ ಅವಿನಾಶ್ ಯಾದವ್ 143 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 62 ರನ್ ಸಿಡಿಸಿದರು. ಪ್ರತಿಕ್ ಜೈನ್ ಐದು, ಅಭಿಮನ್ಯು ಮಿಥುನ್ ನಾಲ್ಕು ವಿಕೆಟ್ ಪಡೆದರು.
ಕರ್ನಾಟಕದ ಮೊದಲ ಇನ್ನಿಂಗ್ಸ್ ಆರಂಭಿಸಿತು. ಆರಂಭದಲ್ಲಿ ಕರುಣ್ ಪಡೆಗೆ ಆಘಾತ ಕಾದಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ನಾಯಕ ಕರುಣ್ (17) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರಂಭಿಕ ದೇವದತ್ 75 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 55 ರನ್ ಬಾರಿಸಿದರು. ಆರು ವಿಕೆಟ್ ಗೆ 110 ರನ್ ಗಳಿಂದ ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕಿತರು ಆಧಾರವಾದರು. ಏಳನೇ ವಿಕೆಟ್ ಗೆ ಶರತ್ ಹಾಗೂ ಕೆ.ಗೌತಮ್ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಗೌತಮ್ 41 ರನ್ ಬಾರಿಸಿ ಔಟ್ ಆದರು.
ಎಸ್.ಶರತ್ 164 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 56 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ಪ್ರತೀಕ್ ಜೈನ್ ಸಹ ಗುರುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಕರ್ನಾಟಕ 9 ವಿಕೆಟ್ ಗೆ 199 ರನ್ ಸೇರಿಸಿದೆ.