ರಣಜಿ: ಕರ್ನಾಟಕಕ್ಕೆ 1, ಹಿಮಾಚಲ ಪ್ರದೇಶಗೆ 3 ಅಂಕ

ಮೈಸೂರು, ಡಿ.28 ಇಲ್ಲಿ ನಡೆದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಆತಿಥೇಯ ತಂಡ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದರಿಂದ ಒಂದು ಅಂಕ ಕಲೆ ಹಾಕಿದೆ.   ಶನಿವಾರ 3 ವಿಕೆಟ್ ಗೆ 191 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ ತಂಡ, 296 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ಮೂರು ಪಂದ್ಯಗಳಿಂದ 10 ಅಂಕ ಕಲೆ ಹಾಕಿದೆ.  ಕರ್ನಾಟಕ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನಾಯಕ ಕರುಣ್ ನಾಯರ್ ಹಾಗೂ ಭರವಸೆಯ ಎಡಗೈ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ ನೀಡಿದರು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡಕ್ಕೆ ಕಾಡಿತು. ಈ ಜೋಡಿಯನ್ನು ಬೇರ್ಪಡಿಸಲು ಹಿಮಾಚಲ ಮಾಡಿಕೊಂಡ ಪ್ಲಾನ್ ಕೈ ಕೊಟ್ಟಿತು.   ಅಂತಿಮವಾಗಿ ಕರುಣ್ ನಾಯರ್ ಆಟ 64 ರನ್ ಗಳಿಗೆ ಸೀಮಿತವಾಯಿತು. ಮಧ್ಯಮ ಕ್ರಮಾಂಕದ ದೇವದತ್ ಶತಕ ವಂಚಿತರಾದರು. 201 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 99 ರನ್ ಬಾರಿಸಿದ ಇವರು ಆರೋರ್ ತೋಡಿದ ಖೆಡ್ಡಾಗೆ ಬಲಿಯಾದರು.  ಉಳಿದಂತೆ ಬಿ.ಆರ್.ಶರತ್ 42, ಅಭಿಮನ್ಯು ಮಿಥುನ್ 22 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹಿಮಾಚಲ ತಂಡದ ಪರ ರಿಷಿ ಧವನ್ 5, ವೈಭವ್ ಆರೋರ್ ಹಾಗೂ ಮಯಾಂಕ್ ದಗಾರ್ ತಲಾ ಎರಡು ವಿಕೆಟ್ ಕಬಳಿಸಿದರು. 182 ರನ್ ಗಳ ಗುರಿಯನ್ನು ಹಿಂಬಾಲಿಸಿದ ಹಿಮಾಚಲ ತಂಡದ ಆರಂಭವೂ ಕಳಪೆಯಾಗಿತ್ತು. 34 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಹಿಮಾಚಲ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ರಿಷಿ ಧವನ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸಂಕ್ಷಿಪ್ತ ಸ್ಕೋರ್  ಕರ್ನಾಟಕ ಮೊದಲ ಇನ್ನಿಂಗ್ಸ್ 166  ಹಿಮಾಚಲ ಪ್ರದೇಶ ಮೊದಲ ಇನ್ನಿಂಗ್ಸ್ 280  ಕರ್ನಾಟಕ ಎರಡನೇ ಇನ್ನಿಂಗ್ಸ್ 296  ಹಿಮಾಚಲ ಪ್ರದೇಶ ಎರಡನೇ ಇನ್ನಿಂಗ್ಸ್ 2 ವಿಕೆಟ್ ಗೆ 34