ರಾಣೇಬೆನ್ನೂರು14: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದೂ ಸೇರಿದಂತೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ ಕೆಲ ಸಂಘಟನೆಗಳು ರಾಜ್ಯ ಬಂದ್ಗೆ ಕರೆ ನೀಡಿದ್ದ ಬಂದ್ ರಾಣೇಬೆನ್ನೂರಲ್ಲಿ ಸಂಪೂರ್ಣ ವಿಫಲಗೊಂಡಿತು.
ಬೆಳಿಗ್ಗೆಯಿಂದಲೇ ನಗರದಲ್ಲೆಡೆ ಅಂಗಡಿ ಮುಗ್ಗಟ್ಟುಗಳು, ಹೋಟಲ್ಗಳು ಬಾಗಿಲು ತೆರೆದು ಯತಾಸ್ಥಿತಿ ಕಾರ್ಯನಿರ್ವಹಿಸಿದವು. ನಗರದಲ್ಲಿ ಯಾವುದೇ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳದೆ ಯಾವುದೇ ಮನವಿ ಸಲ್ಲಿಸುವ ಕಾರ್ಯವನ್ನೂ ಸಹ ಮಾಡದೆ ಇರುವುದು ಕಂಡು ಬಂದಿತು.
ಚಿತ್ರಮಂದಿರ, ಮೆಡಿಕಲ್ ಶಾಪ್, ಸರಕಾರಿ ಮತ್ತು ಖಾಸಗಿ ಆಸ್ಪತ್ರೆ, ಸರಕಾರಿ ವಿವಿಧ ಇಲಾಖೆಗಳು, ಬ್ಯಾಂಕ್ಗಳು, ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಸ್ಎಸ್ಆರ್ಟಿ ಬಸ್ಗಳು ಮತ್ತು ಖಾಸಗಿ ವಾಹನಗಳು ಹಾಗೂ ಆಟೋಗಳು ದಿನನಿತ್ಯದಂತೆ ಸಂಚರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.
ಗ್ರಾಮೀಣ ಭಾಗದ ಜನರು ಸಂತೆ ಮಾರುಕಟ್ಟೆಗಳಿಗೆ ಆಗಮಿಸಿ ತಮ್ಮ ದಿನನಿತ್ಯದ ವಹಿವಾಟು ವ್ಯಾಪಾರಗಳಲ್ಲಿ ತೊಡಗಿದ್ದು ಕಂಡು ಬಂದಿತು. ಒಟ್ಟಿನಲ್ಲಿ ಇಂದು ನೀಡಿದ್ದ ಬಂದ್ ಕರೆಗೆ ನಗರದಲ್ಲಿ ಯಾವುದೇ ಪರಿಣಾಮ ಬೀರದೆ ಬಂದ್ ಸಂಪೂರ್ಣ ವಿಫಲಗೊಂಡಿತು.