ರಾಮನವಮಿ : ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಶುಭಾಶಯ

ನವದೆಹಲಿ, ಏ 2, ರಾಮನವಮಿಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಜನತೆಗೆ ಶುಭ ಹಾರೈಸಿದ್ದಾರೆ.ರಾಮನವಮಿಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾವಣನ ಪ್ರತಿಕೃತಿ ದಹಿಸಿ ದುಷ್ಟಸಂಹಾರದ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಹಲವೆಡೆ ಜನರು ಒಟ್ಟಾಗಿ ಕೋಸಂಬರಿ, ಪಾನಕ ಹಂಚುತ್ತಿದ್ದರು. ಆದರೆ ಈ ಬಾರಿ ಉತ್ಸವದ ಸಂಭ್ರಮ, ಸಡಗರಕ್ಕೆ ಕೊರೊನಾ ಕಾರ್ಮೋಡ ಅಡ್ಡಿಯಾಗಿದೆ.ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗಿರುವ ಕಾರಣ ಜನರು ಗುಂಪು ಸೇರುವಂತಿಲ್ಲ. ದೇವಾಲಯಗಳೂ ಬಂದ್ ಆಗಿದ್ದು ಹಬ್ಬದ ಸಡಗರ ಮರೆಯಾಗಿದೆ. ತಮ್ಮ ತಮ್ಮ ಮನೆಗಳಲ್ಲಿಯೇ ಕೋಸಂಬರಿ, ಪಾನಕ ನೈವೇದ್ಯ ಅರ್ಪಿಸಿ ಶ್ರೀರಾಮನನ್ನು ಸ್ಮರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿ ರಾಮನವಮಿ ಆಚರಿಸುತ್ತಿದ್ದಾರೆ.