ನವದೆಹಲಿ 11: ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ಬುಧವಾರ ಮತ್ತಷ್ಟು ವಾಗ್ದಾಳಿ ನಡೆಸಿದ ಪ್ರತಿಪಕ್ಷಗಳು, ಮೇಲ್ಮನೆಯಲ್ಲಿ ಅಡೆತಡೆಗಳಿಗೆ ಅವರೇ ದೊಡ್ಡ ಕಾರಣ ಎಂದು ಆರೋಪಿಸಿವೆ.
ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಧಂಖರ್ ಅವರ ಕಾರ್ಯವೈಖರಿಯಿಂದಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ಬಿಟ್ಟು ಪ್ರತಿಪಕ್ಷಗಳಿಗೆ ಬೇರೆ ಆಯ್ಕೆ ಇರಲಿಲ್ಲ ಎಂದರು.
ರಾಜ್ಯಸಭಾ ಅಧ್ಯಕ್ಷ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಜಗಳವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸಲು ನಾವು ಈ ಕ್ರಮ ಕೈಗೊಂಡಿದ್ದೇವೆ. ಸಾಕಷ್ಟು ಯೋಚಿಸಿದ ನಂತರ ಅವರ ಪದಚ್ಯುತಿಗೆ ನೋಟಿಸ್ ಸಲ್ಲಿಸುವುದು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಖರ್ಗೆ ಹೇಳಿದರು. ನಾವು ಅವರ ನಡವಳಿಕೆ, ಪಕ್ಷಪಾತದಿಂದ ಬೇಸರಗೊಂಡಿದ್ದೇವೆ. ಸದನದಲ್ಲಿ ಸಭಾಪತಿಯವರ ನಡವಳಿಕೆಯು ದೇಶದ ಘನತೆಗೆ ಧಕ್ಕೆ ತಂದಿದೆ. ಅವರು ರಾಜ್ಯಸಭೆಯ ನಿಯಮಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ದೂರಿದರು.
1952 ರಿಂದ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವನ್ನು ತಂದಿಲ್ಲ. ಏಕೆಂದರೆ, ಆ ಸ್ಥಾನವನ್ನು ಹೊಂದಿರುವವರು ನಿಷ್ಪಕ್ಷಪಾತ ಮತ್ತು ರಾಜಕೀಯವನ್ನು ಮೀರಿದವರು. ಯಾವಾಗಲೂ ನಿಯಮಗಳ ಪ್ರಕಾರ ಸದನವನ್ನು ನಡೆಸುತ್ತಿದ್ದರು. ಆದರೆ, ಇಂದು ಸದನದಲ್ಲಿ ನಿಯಮಕ್ಕಿಂತ ರಾಜಕೀಯವೇ ಹೆಚ್ಚಿದೆ ಎಂದು ಖರ್ಗೆ ಟೀಕಿಸಿದರು.