ದೇವರಹಿಪ್ಪರಗಿ 11: ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಕೂಡಲ ಸಂಗಮ ಗುರುಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಬಂಧಿಸಿದ್ದನ್ನು ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರವು ವೀರಶೈವ ಲಿಂಗಾಯತ ಉಪಪಂಗಡಗಳಿಗೆ ಮೀಸಲಾತಿ ಕೊಡಬೇಕೆನ್ನುವ ಮನೋಭಾವ ಹೊಂದಿಲ್ಲ. ಹಿಂದಿನ ಸರ್ಕಾರದಲ್ಲಿ ಘೋಷಣೆಯಾದ ಮೀಸಲಾತಿಯನ್ನು ಈ ಸರ್ಕಾರ ಅನುಷ್ಠಾನಗೊಳಿಸುತ್ತಿಲ್ಲ. ಪಂಚಮಸಾಲಿ ಮೀಸಲಾತಿ ಸಮುದಾಯಕ್ಕೆ ಕೊಡಲೇಬಾರದು ಎನ್ನುವ ದುರುದ್ದೇಶ ಅವರದ್ದಾಗಿದೆ ಎಂದು ಟೀಕಿಸಿ ಸ್ವಾಮೀಜಿಯವರನ್ನು ಕೂಡಲೇ ಗೌರವಯುತವಾಗಿ ಬಿಡುಗಡೆಗೊಳಿಸಬೇಕು ಮತ್ತು ಬುಧವಾರದ ಅಧಿವೇಶನದಲ್ಲಿ ಸ್ವಾಮೀಜಿಗಳ ಹಾಗೂ ಪಂಚಮಸಾಲಿ ಸಮುದಾಯದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೋರಾಟದ ಸ್ಥಳಕ್ಕೆ ಸಿಎಂ ತಾವೇ ಬಂದು ಮನವಿ ಸ್ವೀಕರಿಸಿ ದೊಡ್ಡ ಸಮುದಾಯದ ಹೋರಾಟಗಾರರಿಗೆ ಭರವಸೆ ನೀಡಬಹುದಾಗಿತ್ತು. ಆದಾಗದಿದ್ದರೆ ಸ್ವಾಮೀಜಿ, ಸಮುದಾಯದ ಮುಖಂಡರ ಮನವೊಲಿಸುವ ಸಾಮರ್ಥ್ಯ ಹೊಂದಿರುವ ಮಂತ್ರಿಗಳನ್ನಾದರೂಕಳಿಸಬಹುದಾಗಿತ್ತು. ಹೋರಾಟಗಾರರು ಚನ್ನಮ್ಮ ವೃತ್ತದಿಂದ ಹೈವೇವರೆಗೂ ಬರಲು ಅವಕಾಶ ಕೊಟ್ಟು ಏಕಾಏಕಿ ಲಾಠಿ ಚಾರ್ಜ್ ಮಾಡಿದ್ದು ಖಂಡನೆ ವಾಗಿದೆ.
ಘಟನೆಯಲ್ಲಿ ಹಲವು ಹೋರಾಟಗಾರರು, ಪೊಲೀಸರೂ ಸೇರಿ ಅನೇಕರಿಗೆ ಪೆಟ್ಟು, ಗಾಯಗಳಾಗಿದ್ದಕ್ಕೆ ಸಾಂತ್ವನ ವ್ಯಕ್ತಪಡಿಸಿದ ಅವರು, ಕಳೆದ ಸರ್ಕಾರ ಇದ್ದಾಗ ಎಂದೂ ಇಂಥ ಅಹಿತಕರ ಘಟನೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರ್ಪ, ಬೊಮ್ಮಾಯಿ ಅವರು ನ್ಯಾಯಯುತ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಕುರಿತು ಸದನದಲ್ಲಿ ಸಮಾಜದ ಮೀಸಲಾತಿ ಪರವಾಗಿ ಇರುತ್ತೇನೆ.ಕೂಡಲೇ ಸರ್ಕಾರ ಸಮಾಜದ ತಾಳ್ಮೆ ಪರೀಕ್ಷಿಸದೆ ಮೀಸಲಾತಿ ಒದಗಿಸಬೇಕು ಹಾಗೂ ಸ್ವಾಮೀಜಿಗಳನ್ನು ಗೌರವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.