ಮಳೆರಾಯನ ಆರ್ಭಟ ತುಂಬಿ ಹರಿದ ಹಳ್ಳ ಕೊಳ್ಳಗಳು

ಶಶಿಧರ ಶಿರಸಂಗಿ

ಶಿರಹಟ್ಟಿ 24: ಮುಂಗಾರು ಮಳೆ ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿ ಮುಂದೆ ಮಳೆಯಿಲ್ಲದೆ ಚಿಂತೆಗೆ ಈಡಾಗಿದ್ದ ಶಿರಹಟ್ಟಿ ಹಾಗೂ ಸುತ್ತ-ಮುತ್ತಲಿನ ಜನರಿಗೆ ಇಂದು ಸುರಿದ ಧಾರಾಕಾರ ಮಳೆ ಬರಗಾಲದ ಭೀತಿಯಲ್ಲಿನ ರೈತನ ಎಲ್ಲಾ ಕಷ್ಟಗಳು ದೂರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಶಿರಹಟ್ಟಿಯಲ್ಲಿ ಸಂತೆಯ ದಿನವಾದ ಮಧ್ಯಾನ್ಹ 2 ಘಂಟೆಗೆ ಅಬ್ಬರದ ಗುಡುಗು ಸಿಡಿಲಿನೊಂದಿಗೆ  ಪ್ರಾರಂಭವಾದ ಮಳೆ ತುಸು ಹೆಚ್ಚಾಗಿಯೆ ಆರ್ಭಟಿಸಿತು. ಇದರಿಂದ ಸಂತೆಯಲ್ಲಿ ಕಾಯಿಪಲ್ಲೆ ವ್ಯಾಪಾರ ಮಾಡುವವರಿಗೆ ತೊಂದರೆಯಾದರೂ ಮಳೆಯಾದ ಸಂತಸ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಮಳೆಗಾಗಿ ಶಿವ ನಾಮಸ್ಮರಣೆ: ಸಕಾಲದಲ್ಲಿ ಮಳೆಯಾಗದ ಕಾರಣ ಪಟ್ಟಣದ ಬಡಿಗೇರ ಓಣಿಯಲ್ಲಿ ಇರುವ ಶರಣ ಬಸವೇಶ್ವರ ಗುಡಿಯಲ್ಲಿ ಶಿವ ನಾಮ ಸಪ್ತಾಹ ಏರ್ಪಡಿಸಲಾಗಿತ್ತು. ಸಪ್ತಾಹದಲ್ಲಿ ಪಾಲ್ಗೊಳ್ಳುವವರು ದೇವಸ್ಥಾನ ಮುಂದುಗಡೆ ತಣ್ಣಿರಿನ ಸ್ನಾನ ಮಾಡಿ ವದ್ದೆಯ ಬಟ್ಟೆಯ ಮೇಲೆಯೇ ದೇವಸ್ಥಾನದ ಒಳಗಡೆ ಪ್ರವೇಶಿಸಿ "ಓಂ ನಮಃ ಶಿವಾಯ ಶಿವಾಯ ನಮಃ ಓಂ" ಎಂದು ಸ್ಮರಿಸುತ್ತಾ ದೇವರಲ್ಲಿ ಮಳೆಗಾಗಿ ಧ್ಯಾನ ಮಾಡಬೇಕು. ಸಪ್ತಾಹ ಪ್ರಾರಂಭವಾಗಿ ಎರಡು ದಿನ ಕಳೆಯುವದರೊಳಗಾಗಿ ಧಾರಾಕಾರ ಮಳೆಯಾಗಿರುವದು ಜನರಿಗೆ ದೇವರಲ್ಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದಂತಾಗಿದೆ. ರಸ್ತೆ ತುಂಬಾ ಕೊಳಚೆ ನೀರು. ಪಟ್ಟಣದಲ್ಲಿ ಸ್ವಲ್ಪ ಮಳೆಯಾದರೂ ಸಾಕು ಚರಂಡಿಗಳೆಲ್ಲಾ ತುಂಬಿ ಅದರಲ್ಲಿದ್ದ ಕೊಳಕು ಗಲಿಜು ರಸ್ತೆ ಉದ್ದಕ್ಕೂ ಹರಿಯುತ್ತದೆ. ಇಂದಾದ್ದೂ ಅದೆ. ಸಂತೆಯ ಕಾರಣ ರಸ್ತೆಯ ಎರಡು ಬದಿಯಲ್ಲು ಕಾಯಿ ಪಲ್ಲೆ ಮಾರಟಕ್ಕೆ ಹಚ್ಚಿದ್ದ ವ್ಯಾಪಾರಸ್ಥರು ಜೋರಾಗಿ ಮಳೆಯಾಗಿದ್ದರಿಂದ ಚರಂಡಿಯಿಂದ ಬಂದ ಕೊಳಚೆ ನೀರು ವ್ಯಾಪರಕ್ಕೆ ತಂದಿದ್ದ ಕಾಯಿಪಲ್ಲೆ ಜೋತೆಗೆ ರಸ್ತೆ ಉದ್ದಕ್ಕೂ ಹರಿಯುತ್ತದ್ದರೆ ಅದನ್ನು ನೋಡಿಯೂ ನಿಸ್ಸಾಹಾಯಕರಂತೆ ರೈತರು ವ್ಯಾರಸ್ಥರು ನಿಂತಿದ್ದು ನೋಡುವ ಜನರ ಮನ ಕಲಕುವಂತಿತ್ತು. ಮತ್ತು ಈ ಕೊಳಚೆ ನೀರಿನಿಂದ ಮುಕ್ತಿ ಎಂದು ದೇವರಲ್ಲಿ ಪ್ರಾರ್ಥಿಸುವಂತಿತ್ತು.