ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯಕ್ಕೆ ಕೇಂದ್ರದ ನೆರವಿನ ಅಭಯ

ಬೆಳಗಾವಿ, ಆಗಸ್ಟ್ 8     ಉತ್ತರ ಕರ್ನಾಟಕ ಮತ್ತು ಕರಾವಳಿ ಸೇರಿದಂತೆ  ರಾಜ್ಯದ   15 ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹದ ಪರಿಸ್ಥಿತಿ ನಿಭಾಯಿಸಲು ರಾಜ್ಯಕ್ಕೆ ಎಲ್ಲ ನೆರವು, ಸಹಕಾರ  ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ರಾಜ್ಯಕ್ಕೆ  ಹೆಚ್ಚಿನ ರಕ್ಷಣಾ ತಂಡಗಳನ್ನು ರವಾನಿಸುವುದಾಗಿಯೂ,  ಪ್ರವಾಹ ಪರಿಹಾರ ಕಾರ್ಯಾಚರಣೆ ನಿಯೋಜನೆಗಾಗಿ  ಹತ್ತು ಹೆಲಿಕಾಪ್ಟರ್ಗಳನ್ನು ಕಳುಹಿಸಿಕೊಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.   ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ  ದೂರವಾಣಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿಯೂ, ಜೊತೆಗೆ ಹೆಚ್ಚಿನ ತಂಡಗಳನ್ನು ಕಳುಹಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಪ್ರವಾಹ ಪೀಡಿತ ಮುಂಬೈ - ಕರ್ನಾಟಕ ಭಾಗದ ಜಿಲ್ಲೆಗಳಿಗೆ ಭೇಟಿ ನೀಡಿರುವ  ಮುಖ್ಯಮಂತ್ರಿ ಇಂದು ಬೆಳಗಾವಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ  ಜನರ ಅಹವಾಲು ಕೇಳಿದ್ದಾರೆ. ಪ್ರವಾಹ ಪೀಡಿತ ಕುಟುಂಬಗಳ ಸಂತ್ರಸ್ತರಿಂದ  ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಅಭಯ ನೀಡಿದ್ದಾರೆ. ರಾಜ್ಯದ 15 ಕ್ಕೂ  ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಅವಘಡಗಳಿಂದ ನಿನ್ನೆ ಒಂದೇ ದಿನ 11 ಮಂದಿ ಮೃತಪಟ್ಟಿದ್ದು  ಇದರ ಜೊತೆಗೆ ಸಾವಿರಾರು ಎಕರೆ  ಪ್ರದೇಶದಲ್ಲಿನ ಬೆಳೆ ಇತರೆ ಆಸ್ತಿಪಾಸ್ತಿಗೂ ಬಹಳ ನಷ್ಟವಾಗಿದೆ.  ಮುಖ್ಯಮಂತ್ರಿ ಭೇಟಿಯ ಸಮಯದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಹಲವು ಶಾಸಕರು ಉಪಸ್ಥಿತರಿದ್ದರು.