ಬೆಳಗಾವಿ, ಆ, 5 ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಬೆಳಗಾವಿ ಭಾಗದ ಲೋಂಡ ಹಾಗೂ ತಿನೈ ಘಾಟ್ ರೈಲು ಸಂಚಾರ ಪುನರಾರಂಭಗೊಂಡಿದೆ. ಮಳೆಯಿಂದ ರೈಲು ಹಳಿ ಕೆಳಭಾಗದಲ್ಲಿ ಲಘು ಭೂಕುಸಿತ ಉಂಟಾಗಿರುವುದರಿಂದ ಈ ಮಾರ್ಗದ ಎಲ್ಲಾ ರೈಲು ಸಂಚಾರವನ್ನು ನಿನ್ನೆಯಿಂದ ಸ್ಥಗಿತಗೊಳಿಸಲಾಗಿತ್ತು. ಪ್ರತಿಕೂಲ ಹವಾಮಾನದಿಂದ ಬೆಳಗಾವಿ - ಕ್ಯಾಸಲ್ ರಾಕ್ ನಡುವಿನ ರೈಲು ಮಾರ್ಗಗಳನ್ನು ಸಹ ಭಾಗಶಃ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಗಾವಿಯಿಂದ ಕ್ಯಾಸ್ಟಲ್ ರಾಕ್ ಗೆ ಪ್ರಯಾಣಿಸಬೇಕಿದ್ದ ಕ್ಯಾಸ್ಟಲ್ ರಾಕ್-ಮಿರಾಜ್ ಪ್ರಯಾಣಿಕರ ರೈಲನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ರೈಲ್ವೆ ಹಿರಿಯ ಅಧಿಕಾರಿಗಳು ಕಳೆದ 24 ಗಂಟೆಗಳಿಂದ ನಿರಂತರ ದುರಸ್ತಿ ಕಾರ್ಯ ಕೈಗೊಂಡ ಪರಿಣಾಮ ಇದೀಗ ರೈಲು ಸೇವೆ ಯಥಾಸ್ಥಿತಿಗಿಗೆ ಮರಳಿದೆ.