ರಾಹುಲ್, ಪ್ರಿಯಾಂಕಾ ಚುನಾವಣಾ ಭಕ್ತರು: ಬಿ.ಎಲ್‌.ಸಂತೋಷ್ ಲೇವಡಿ

ಕೊಪ್ಪಳ, ಏ20:  ಪ್ರಧಾನಿ ನರೇಂದ್ರ ಮೋದಿ ದೇವರ ಭಕ್ತರಾಗಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಭಕ್ತರು ಎಂದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಲೇವಡಿ ಮಾಡಿದ್ದಾರೆ.

ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದ ಶಕ್ತಿ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಪಂಚೆ ಸರಿಯಾಗಿ ಕಟ್ಟಲೂ ಅವರಿಗೆ ಬರುವುದಿಲ್ಲ. ಅವರು ಪಂಚೆ ಕಟ್ಟಿ ಹೋಗುವಾಗ ಜೋಕರ್ ಹೋದಂತೆ ಕಾಣುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಾಲದಲ್ಲೂ ದೇವ ಭಕ್ತರು ಎಂದು ಹೇಳಿದರು.

 ರಾಹುಲ್‌ ಸಹೋದರಿ ಪ್ರಿಯಾಂಕಾ ಗಾಂಧಿ, ಗಂಡ ಇದ್ದರೂ ತಮ್ಮ ಹಣೆ ಮೇಲೆ ಕುಂಕುಮ ಇಡುವುದಿಲ್ಲ. ಅವರ ಆರು ತಿಂಗಳ ಹಿಂದಿನ ಫೋಟೋ ನೋಡಿದರೆ ಅದರಲ್ಲಿ ಕುಂಕುಮ ಇರಲಿಲ್ಲ. ಆದರೆ ಇದೀಗ ಚುನಾವಣೆಗಾಗಿ ಹಣೆ ಮೇಲೆ ತಿಲಕ ಹಾಕಿರುವುದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಗೆ ಮತ ಹಾಕಿದರೆ ಒಂದೇಟಿಗೆ ಎರಡು ಹಕ್ಕಿ ಹೊಡೆಯಬಹುದು. ಬಿಜೆಪಿಗೆ ಮತ ಹಾಕಿದರೆ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂದು ಸಂತೋಷ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಕರ್ನಾಟಕದಲ್ಲಿ ಒಂದು ಮತಕ್ಕೆ ಎರಡು ಸರಕಾರ ಯೋಜನೆ ಜಾರಿಗೆ ತರುತ್ತಿದ್ದೇವೆ. ಸಾಲಮನ್ನಾ ಹೆಸರಲ್ಲಿ ನೋಟಿಸ್ ಕೊಡುವ ಸರ್ಕಾರವನ್ನು ತೆಗೆದುಹಾಕಬೇಕು ಎಂದು ಹೇಳಿದರು.