ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞ: ಡಾ. ಅಜಿತ ಪ್ರಸಾದ

ಧಾರವಾಡ 05:ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.  ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾದ ಇವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತರತ್ನ ರಾಧಾಕೃಷ್ಣನ್ ಅವರು ತಮ್ಮ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದ  ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕರು ಅನುಸರಿಸಿ ವಿದ್ಯಾರ್ಥಿಗಳಲ್ಲಿ ಮೌಲ್ಯಭರಿತ ಜೀವನಶೈಲಿಯನ್ನು ರೂಪಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಕರೆ ನೀಡಿದರು. 

ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಎನ್‌.ಎಸ್‌.ಎಸ್‌. ಘಟಕ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.  

ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಒಬ್ಬ ವಿದ್ವಾಂಸ, ತತ್ವಜ್ಞಾನಿ ಮತ್ತು ರಾಜಕಾರಣಿ. ಅವರು ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಧಾಕೃಷ್ಣನ್ ಅವರು ಒಬ್ಬ ಅತ್ಯುತ್ತಮ ಬರಹಗಾರರು. ತಮ್ಮ ಬರಹಗಳ ಮೂಲಕ ಭಾರತೀಯ ಮೂಲ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸಿದವರು. ಒಬ್ಬ ಶ್ರೇಷ್ಠ ಶಿಕ್ಷಕ, ನವೀನ ಚಿಂತಕ ಮತ್ತು ಹಿಂದೂ ತತ್ವಜ್ಞಾನಿಯಾಗಿದ್ದರು. ಇವರು ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದದ್ದು ಎಂದು ತೋರಿಸಿಕೊಟ್ಟವರು. ತಮ್ಮ ಜೀವನದ ನಲವತ್ತು ವರ್ಷಗಳನ್ನು ಶಿಕ್ಷಕ ವೃತ್ತಿಯಲ್ಲಿ ಕಳೆದವರು. ಅಲ್ಲದೇ ಶಿಕ್ಷಕರ ಸ್ಥಾನಮಾನಕ್ಕೆ, ಸರಿಯಾದ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಲು ಶ್ರಮಿಸಿದ ಮಹಾನ ಮೇಧಾವಿ ಎಂದು ಹೇಳಿದರು. 

ಎಸ್‌.ಎಂ.ಐ. ಪದವಿ ಕಾಲೇಜಿನಲ್ಲಿ ಎಂ.ಎ. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಇಂಗ್ಲೀಷ ವಿಭಾಗದ ಮುಖ್ಯಸ್ಥರಾಗಿ 11 ವರ್ಷ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಬಿ. ಜಿ. ಕುಂಬಾರ ಅವರನ್ನು ಸನ್ಮಾನಿಸಲಾಯಿತು. 

ಡಾ. ಸೂರಜ ಜೈನ್, ಮಹಾವೀರ ಉಪಾದ್ಯೆ, ಪ್ರೊ. ಭಾರತಿ ಶಾನಭಾಗ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಎನ್‌.ಎಸ್‌.ಎಸ್‌. ಸ್ವಯಂ ಸೇವಕರು ಉಪಸ್ಥಿತರಿದ್ದರು. 

ಸಿಂಚನಾ ಭಟ್ ಪ್ರಾರ್ಥನಾ ಗೀತೆ ಹಾಡಿದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು, ಪ್ರೊ. ಮಹಾಂರ ದೇಸಾಯಿ ನಿರೂಪಿಸಿದರು, ಪ್ರೊ. ಬಲಭೀಮ ಹಾವನೂರ ವಂದಿಸಿದರು.