ರಾಂಚಿ, ಅ 19: ಕಗಿಸೋ ರಬಾಡ (15 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ಭಾರತ ತಂಡದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ಮೊದಲನೇ ದಿನ ಆರಂಭಿಕ ಆಘಾತ ಅನುಭವಿಸಿತು. ಇಲ್ಲಿನ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 23 ಓವರ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ಯೋಜನೆಯನ್ನು ಆಫ್ರಿಕಾ ವೇಗಿ ಕಗಿಸೋ ರಬಾಡ ತಲೆ ಕೆಳಗಾಗುವಂತೆ ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ದ್ವಿಶತಕ ಹಾಗೂ ಶತಕ ಸಿಡಿಸಿ ಭರ್ಜರಿ ಲಯದಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ (10) ಅವರು ಬಹುಬೇಗ ರಬಾಡ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ, ಕ್ರೀಸ್ಗೆ ಬಂದ ಟೆಸ್ಟ್ ವಿಶೇಷ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರನ್ನು ಶೂನ್ಯಕ್ಕೆ ಕಗಿಸೋ ರಬಾಡ ಔಟ್ ಮಾಡಿ ಭಾರತಕ್ಕೆ ಆಘಾತ ನೀಡಿದರು. 12 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಅವರನ್ನು ಏನ್ರಿಚ್ ನಾಡ್ಜ್ ಪೆವಿಲಿಯನ್ಗೆ ಅಟ್ಟಿದರು. ಆರಂಭಿಕನಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಒಂದು ಬದಿ ವಿಕೆಟ್ ಉರುಳುತ್ತಿದ್ದರೂ ಶಾಂತಚಿತ್ತದಿಂದ ರೋಹಿತ್ ಬ್ಯಾಟಿಂಗ್ ಮಾಡಿದರು. 68 ಎಸೆತಗಳನ್ನು ಎದುರಿಸಿದ ಅವರು ಎರಡು ಬೌಂಡರಿಯೊಂದಿಗೆ ಅಜೇಯ 38 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಉಪ ನಾಯಕ ಅಜಿಂಕ್ಯಾ ರಹಾನೆ (11) ಇದ್ದಾರೆ. ಗಾಯಾಳು ಕುಲ್ದೀಪ್ ಯಾದವ್ ಅವರ ಬದಲು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದ್ದ ಶಹದಾಜ್ ನದೀಮ್ ಅವರು ಚೊಚ್ಚಲ ಟೆಸ್ಟ್ ಕ್ರಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಭಾರತ ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ವಶ ಪಡಿಸಿಕೊಂಡಿದೆ. ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ) ಭಾರತ ಪ್ರಥಮ ಇನಿಂಗ್ಸ್: 23 ಓವರ್ ಗಳಿಗೆ 71/3 (ರೋಹಿತ್ ಶರ್ಮಾ ಔಟಾಗದೆ 38; ಕಗಿಸೋ ರಬಾಡ 15 ಕ್ಕೆ 2, ಏನ್ರಿಚ್ ನಾಡ್ಜ್ 28 ಕ್ಕೆ.