ಶಶಿ ತರೂರ್ ಗೆ ೫ ಸಾವಿರ ದಂಡ ವಿಧಿಸಿದ ದೆಹಲಿ ಕೋರ್ಟ್

ನವದೆಹಲಿ, ಫೆ ೧೫ :    ಪ್ರಧಾನಿ ನರೇಂದ್ರ ಮೋದಿ ಅವರನ್ನು  ಉದ್ದೇಶಿಸಿ  ಪರೋಕ್ಷವಾಗಿ  ನೀಡಿದ್ದ  ಅನುಚಿತ   ಹೇಳಿಕೆ  ಸಂಬಂಧ  ಹೂಡಲಾಗಿರುವ  ಮಾನನಷ್ಟ   ಪ್ರಕರಣದ  ವಿಚಾರಣೆಗೆ  ಪದೆ ಪದೆ  ಗೈರು ಹಾಜರಾಗುತ್ತಿರುವ   ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಅವರಿಗೆ ದೆಹಲಿ ನ್ಯಾಯಾಲಯವೊಂದು   ದಂಡ ವಿಧಿಸಿದೆ.

ಶಶಿ ತರೂರ್  ಹೇಳಿಕೆ   ವಿರುದ್ದ   ಬಿಜೆಪಿ ಮುಖಂಡ  ರಾಜೀವ್  ಬಬ್ಬರ್  ಎಂಬುವರು   ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ  ಶಶಿ ತರೂರ್ ಪದೇ ಪದೇ    ವಿಚಾರಣೆಗೆ ಗೈರು ಹಾಜರಾಗಿದ್ದಕ್ಕೆ   ಕೆಂಡಾ ಮಂಡಲವಾದ  ನ್ಯಾಯಾಲಯ  ೫ ಸಾವಿರ ರೂಪಾಯಿ  ದಂಡ ವಿಧಿಸಿದೆ.  ಅಲ್ಲದೆ ಪ್ರಕರಣದ ವಿಚಾರಣೆಯನ್ನು ಮಾರ್ಚ್ ೪ ಕ್ಕೆ ಮುಂದೂಡಿ  ಅಂದು   ವಿಚಾರಣೆಗೆ  ಹಾಜರಾಗಲು     ತರೂರ್ ಗೆ  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ  ತಾಕೀತು ಮಾಡಿದ್ದಾರೆ.

೨೦೧೮ ರಲ್ಲಿ ಬೆಂಗಳೂರು ಸಾಹಿತ್ಯೋತ್ಸವದಲ್ಲಿ   ಶಶಿ ತರೂರ್ ಅವರು ಈ ವಿವಾದಾತ್ಮಕ  ಹೇಳಿಕೆ ನೀಡಿದ್ದರು.   ಪ್ರಧಾನ ಮಂತ್ರಿ  ನರೇಂದ್ರ ಮೋದಿ ಶಿವಲಿಂಗದ ಮೇಲೆ  ಹರಿದಾಡುತ್ತಿರುವ  ಚೇಳು  ಅದನ್ನು  ಕೈ ನಿಂದ ತೆಗೆದು ಎಸೆಯಲು ಆಗುವುದಿಲ್ಲ.  ಚಪ್ಪಲಿಯಿಂದ ಹೊಡೆದು ಹಾಕಲು ಸಾಧ್ಯವಿಲ್ಲ   ಎಂದು  ಹೇಳಿದ್ದರು.

ಈ  ಹೇಳಿಕೆ  ನನ್ನದಲ್ಲ   ಗುಜರಾತ್   ರಾಜ್ಯದ   ಆರ್ ಎಸ್ ಎಸ್  ಕಾರ್ಯಕರ್ತರೊಬ್ಬರು  ಪತ್ರಕರ್ತರೊಬ್ಬರಿಗೆ  ಹೇಳಿದ್ದು,  ಅದನ್ನು ನಾನು ಉಲ್ಲೇಖಿಸಿದ್ದೇನೆ  ಎಂದು ಶಶಿ ತರೂರ್ ನಂತರ  ಹೇಳಿದ್ದರು. ಆದರೆ  ಈ ಹೇಳಿಕೆ  ತೀವ್ರ   ವಿವಾದವನ್ನು  ಸೃಷ್ಟಿಸಿತ್ತು.