ನವದೆಹಲಿ, ಮಾ ೧೧: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿವೆ, ಇದರ ಪ್ರಯೋಜನಗಳನ್ನು ದೇಶದ ಸಾಮಾನ್ಯ ಜನರಿಗೆ ತಲುಪಿಸಲು ಯಾವುದೇ ಪ್ರಯತ್ನ ನಡೆಸದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ, ಜನರಿಂದ ಚುನಾಯಿತಗೊಂಡಿರುವ ಕಾಂಗ್ರೆಸ್ ಸರ್ಕಾರಗಳನ್ನು ಅಭದ್ರಗೊಳಿಸುವಲ್ಲಿ ಬಿಡುವಿಲ್ಲದೆ, ತೊಡಗಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ದೂರಿದ್ದಾರೆ.ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುವ ಪ್ರಧಾನಿ ಕಾರ್ಯಾಲಯ, ಜಾಗತಿಕ ಮಾರುಕಟ್ಟೆಗಳಲ್ಲಿ ಶೇ. ೩೫ರಷ್ಟು ಕುಸಿದಿರುವ ತೈಲ ಬೆಲೆಗಳ ಲಾಭವನ್ನು ಜನರಿಗೆ ವರ್ಗಾಯಿಸುವುದನ್ನು ಮರೆತಂತೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ನಂತರ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.ದರ ಇಳಿಕೆಯ ಲಾಭವನ್ನು ದಯಮಾಡಿ ಭಾರತೀಯರಿಗೆ ವರ್ಗಾಯಿಸಿ, ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆಯನ್ನು ೬೦ ರೂಪಾಯಿಗೆ ಇಳಿಸಬಹುದಲ್ಲವೆ? ಸ್ಥಗಿತಗೊಂಡಿರುವ ದೇಶದ ಆರ್ಥಿಕತೆಗೆ ಇದರಿಂದ ಲಾಭವಾಗಲ್ಲವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳು ಕುಸಿದಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದು, ಬೆಲೆ ಇಳಿಕೆಯ ಲಾಭಗಳನ್ನು ಜನಸಾಮಾನ್ಯರಿಗೆ ವರ್ಗಾಯಿಸಿ, ಆರ್ಥಿಕ ಚೇತರಿಕೆಗೆ ತೈಲ ಬೆಲೆ ಕುಸಿತಗೊಂಡಿರುವ ಸದವಕಾಶ ಬಳಸಿಕೊಳ್ಳಲು ಸರ್ಕಾರ ಸಿದ್ದವಾಗಿಲ್ಲ ಎಂದು ದೂರಿದ್ದಾರೆ. ದೇಶಾದ್ಯಂತ ಪ್ರಮುಖ ಮೆಟ್ರೋ ನಗರಗಳಲ್ಲಿ ತೈಲೋತ್ಪನ್ನಗಳ ಬೆಲೆಗಳನ್ನು ಲೀಟರ್ ಗೆ ೨ ರೂಪಾಯಿ ಇಳಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ ೨.೬೯ ರೂ ತಗ್ಗಿಸಿ, ಲೀಟರ್ ಗೆ ೭೦.೨೯ ರೂಪಾಯಿ ನಿಗದಿಪಡಿಸಲಾಗಿದೆ. ಡೀಸೆಲ್ ಬೆಲೆ ೨.೩೩ ರೂ ಇಳಿಸಿ, ಲೀಟರ್ಗೆ ೬೩.೦೧ ನಿಗದಿಪಡಿಸಲಾಗಿದೆ.ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸರ್ಕಾರದೊಂದಿಗೆ ಸಮರಕ್ಕೆ ಇಳಿದಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ಎಂದು ಕಾಂಗ್ರೆಸ್ ಪರಿಗಣಿಸಿದೆ.ಬಿಜೆಪಿ ಮೂಲಗಳ ಪ್ರಕಾರ, ಗುಣ ಲೋಕಸಭಾದ ಮಾಜಿ ಸಂಸದ ಇಂದು ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸೇರಲಿದ್ದಾರೆ