ಗುಣಮಟ್ಟದ ಶಿಕ್ಷಣ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿ ಮಗುವಿನ ಶಾಸನಬದ್ಧ ಹಕ್ಕು

Quality education and freedom of expression are statutory rights of every child

ವಿಜಯಪುರ ಜ.10: ಸದೃಢ ಆರೋಗ್ಯ, ಗುಣಮಟ್ಟದ ಶಿಕ್ಷಣ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿ ಮಗುವಿನ ಶಾಸನಬದ್ಧ ಹಕ್ಕು, ಅದನ್ನು ಸಕಾಲದಲ್ಲಿ, ಸಮರ್ಥವಾಗಿ ಮಕ್ಕಳಿಗೆ ದೊರಕಿಸಿಕೊಡುವುದು ಶಾಲಾ ಶಿಕ್ಷಣ ವ್ಯವಸ್ಥೆಯ ಪ್ರತಿಯೋರ್ವ ಭಾಗೀದಾರರ ಕರ್ತವ್ಯ ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಹಂತದ ಶಾಲಾ ಮೇಲ್ವಿಚಾರಣಾಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪರಿಪಾಲನೆ ಕುರಿತು ನಿರ್ಣಾಯಕ  ಪಾತ್ರ ನಿರ್ವಹಿಸುವ ಗುರುತರವಾದ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀ ಶಶಿಧರ ಕೋಸುಂಬೆ ಅವರು ಕರೆ ನೀಡಿದರು.  

ವಿಜಯಪುರ ನಗರದ ಪಿ.ಡಿ.ಜೆ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ಜರುಗಿದ ಜಿಲ್ಲೆಯ ಪ್ರಗತಿ ಪರೀಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಪ್ರತಿಯೊಂದೂ ಶಾಲೆಯಲ್ಲಿ ಮಕ್ಕಳ ಸಹಾಯವಾಣಿ 1098, ಸಲಹಾ ಪೆಟ್ಟಿಗೆ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ, ಕಾರ್ಯಾತ್ಮಕ ಶೌಚಾಲಯ, ಉತ್ತಮವಾದ ಆಟದ ಮೈದಾನ, ಸಾಕಷ್ಟು ಸಂಖ್ಯೆಯಲ್ಲಿ ಆಟೋಪಕರಣಗಳು, ಪಾಠೋಪಕರಣಗಳು ಮತ್ತು ಪೀಠೋಪಕರಣಗಳು ಕಡ್ಡಾಯವಾಗಿ ಲಭ್ಯವಿರುವಂತೆ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.  

ಆರ್‌.ಡಿ.ಪಿ.ಆರ್ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಶಾಲೆಯಿಂದ ಹೊರಗುಳಿದ 10268 ಮಕ್ಕಳ ಪೈಕಿ ಇಲ್ಲಿಯವರೆಗೂ 7114 ಮಕ್ಕಳನ್ನು ಮುಖ್ಯ ವಾಹಿನಿಗೆ ತರಲಾಗಿದ್ದು ಬಾಕಿ ಉಳಿದಿರುವ 3154 ಮಕ್ಕಳನ್ನು ಶೀಘ್ರವಾಗಿ ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಪೂರ್ಣಗೊಳಿಸಬೇಕು ಶಾಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿ, ಸ್ವಚ್ಛತಾ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಇತರೆ ಎಲ್ಲ ಅನ್ಯಕಾರ್ಯನಿಮಿತ್ತ ನಿಯುಕ್ತಿಗೊಳ್ಳುವ ಪ್ರತಿಯೊಬ್ಬರಿಂದ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ಕುರಿತು ಬದ್ಧತಾ ಮುಚ್ಚಳಿಕೆ ಪಡೆಯಬೇಕು, ಶಾಲೆಗಳಲ್ಲಿ ಹಂಗಾಮಿಯಾಗಿ ನೇಮಕಗೊಳ್ಳುವ ಅತಿಥಿ ಶಿಕ್ಷಕರುಗಳ  ಕುರಿತು ಪೋಲೀಸ್ ಇಲಾಖೆಯಿಂದ ಪೂರ್ವಾಪರ ಪರೀಶೀಲನಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದು ದಾಖಲೆಗಳನ್ನು ನಿರ್ವಹಿಸಲು ಕ್ರಮ ವಹಿಸುವಂತೆ ಕ್ಷೇತ್ರ-ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. 

ಶಾಲಾ ಹಂತದ ಮಕ್ಕಳ ರಕ್ಷಣಾ ಸಮಿತಿಗಳನ್ನು ಕ್ರಿಯಾಶೀಲಗೊಳಿಸುವುದರ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತು ಇತರೆ ಯಾವುದೇ ರೀತಿಯಲ್ಲಿ ಮಕ್ಕಳ ನೈಸರ್ಗಿಕ ಹಕ್ಕುಗಳ ಉಲ್ಲಂಘನೆಯಾಗದಂತೆ ಜಾಗೃತೆ ಮತ್ತು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.  

ನೆರೆಯ ಮಹಾರಾಷ್ಟ್ರ ರಾಜ್ಯದೊಂದಿಗೆ ಮೇರೆಗಳನ್ನು ಹಂಚಿಕೊಳ್ಳುವ ಚಡಚಣ, ಇಂಡಿ ಮತ್ತು ವಿಜಯಪುರ ಗ್ರಾಮೀಣ ತಾಲ್ಲೂಕುಗಳ ಗಡಿಭಾಗದಲ್ಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ವಿಶೇಷ ಗಮನಹರಿಸುವ ಮೂಲಕ ದ್ವಿದಾಖಲಾತಿಯ ಸಮಸ್ಯೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಿದರು.  

ಆಧಾರ ಜೋಡನೆ, ಅಪಾರ ನೋಂದಣಿ ಮತ್ತು ಸ್ಯಾಟ್ಸ್‌ ವಿಷಯಗಳ ಕುರಿತು ಆಂದೋಲನ ರೂಪದಲ್ಲಿ ಕಾರ್ಯಾಚರಣೆ ನಡೆಸಿ ಜಿಲ್ಲೆಯ ಪ್ರಗತಿಯನ್ನು ಹೆಚ್ಚಿಸಬೇಕೆಂದು ಸಲಹೆ ನೀಡಿದರು.  

ಉಪನಿರ್ದೇಶಕಿ ಟಿ.ಎಸ್‌.ಕೊಲ್ಹಾರ ಇವರು ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಮಗ್ರ ಅಂಕಿ ಸಂಖ್ಯೆಗಳ ವಿವರಗಳನ್ನು ಸಭೆಗೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರು,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಎಲ್ಲ ಕ್ಷೇತ್ರ-ಶಿಕ್ಷಣಾಧಿಕಾರಿಗಳು, ಕ್ಷೇತ್ರ-ಸಮನ್ವಯಾಧಿಕಾರಿಗಳು, ಬಿ.ಆರ್‌.ಪಿ, ಇ.ಸಿ.ಓ, ಸಿ.ಆರ್‌.ಪಿ. ಹಾಗೂ ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.