ಪುಟ್ಟರಾಜ ಸಮ್ಮಾನ ಪ್ರದಾನ ಸಮಾರಂಭ

Puttaraja award ceremony

ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನಾಚರಣೆ  

ಧಾರವಾಡ 02: ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ(ರಿ) ಧಾರವಾಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಪದ್ಮವಿಭೂಷಣ ಡಾ.ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನದ ಅಂಗವಾಗಿ ಸಂಗೀತೋತ್ಸವ ಹಾಗೂ ಪುಟ್ಟರಾಜ ಸಮ್ಮಾನ ಪ್ರದಾನ ಸಮಾರಂಭವನ್ನು ದಿ.03.03.2025ರಂದು ಸಂಜೆ 5.30 ಗಂಟೆಗೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜನೆ ಮಾಡಿದೆ.   

ಕರ್ನಾಟಕದ ಹೆಸರಾಂತ ಕಿರಾಣಾ-ಗ್ವಾಲಿಯರ್ ಪರಂಪರೆಯ ಗಾಯಕರಾದ ಪಂ.ಗಣಪತಿ ಭಟ್ಟ ಹಾಸಣಗಿಯವರು 2025ನೇ ಸಾಲಿನ ಪುಟ್ಟರಾಜ ಸಮ್ಮಾನಕ್ಕೆ ಭಾಜನರಾಗಿದ್ದಾರೆ. ಪುಟ್ಟರಾಜ ಸಮ್ಮಾನವು ರೂ.ಒಂದು ಲಕ್ಷಗಳ ನಗದು, ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನೊಳಗೊಂಡಿದೆ.   

ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್‌.ಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.  ಮುರುಘಾಮಠದ ಪರಮಪೂಜ್ಯ ಮ.ನಿಪ್ರ. ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಆಯಿ ಆಗಮಿಸುವರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸುವರು, ಉಪಾಧ್ಯಕ್ಷ ಶಂಕರ ಕುಂಬಿ. ಕೋಶಾಧ್ಯಕ್ಷ ಪಂ. ಡಿ.ಕುಮಾರದಾಸ್, ಕಾರ್ಯದರ್ಶಿ ಪಂ. ಎಂ. ವೆಂಕಟೇಶಕುಮಾರ  ಉಪಸ್ಥಿತರಿರುವರು.   

ನಂತರ ಜರುಗುವ ಸಂಗೀತೋತ್ಸವದಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕ ಪಂ.ಗಣಪತಿ ಭಟ್ಟ ಹಾಸಣಗಿ ಅವರ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ ಹಾಗೂ ಡಾ.ಪುಟ್ಟರಾಜ ಭಜಂತ್ರಿ ಅವರ ಶಹನಾಯಿ ವಾದನಕ್ಕೆ ದಯಾನಂದ ಸುತಾರ ತಬಲಾ ಸಾಥ್ ಸಂಗತ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ