ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರಕಲಿ : ಮಹಾಂತೇಶ ಮಲ್ಲನಗೌಡರ

Puttaraja Gawai to receive Bharat Ratna posthumously: Mahantesh Mallan Gowda

ಲೋಕದರ್ಶನ ವರದಿ 

ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರಕಲಿ : ಮಹಾಂತೇಶ ಮಲ್ಲನಗೌಡರ 

ಕೊಪ್ಪಳ 18: ಪಂಡಿತ ಪುಟ್ಟರಾಜ ಗವಾಯಿಗಳು ತಮ್ಮ ಸಂಗೀತ ಸೇವೆಯಿಂದ ಅನೇಕ ಅಂಧರ ಬಾಳಿನಲ್ಲಿ ಬೆಳಕು ತುಂಬಿದ ಮಹಾಚೇತನ, ಇವರ ಸಂಗೀತ ಸೇವೆ ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗದೇ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರಕಿದರೆ, ಪ್ರಶಸ್ತಿಗೆ ನಿಜವಾದ ಗೌರವ ದೊರಕಿದಂತಾಗುತ್ತದೆ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು. 

ಅವರು ಸೋಮವಾರ ಸಂಜೆ ನಗರದ  ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಡಾ.ಪಂ.ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘ, ಹಿರೇಬಗನಾಳ ಇವರಿಂದ ಹಮ್ಮಿಕೊಂಡಿದ್ದ ಪದ್ಮಭೂಷಣ ಡಾ.ಪಂಡಿತ್ ಪುಟ್ಟರಾಜ  ಕವಿ ಗವಾಯಿಗಳವರ 111ನೇ ಜನ್ಮದಿನದ ಸಮಾರಂಭ ಅಂಗವಾಗಿ ಹಮ್ಮಿಕೊಂಡ ಗುರುನಮನ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ, ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

ಹಾನಗಲ್ಲ ಗುರುಕುಮಾರೇಶ್ವರ ಶಿವಯೋಗಿಗಗಳು ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮದ ಪೂರ್ಣ ಜವಾಬ್ದಾರಿ ಪಂಚಾಕ್ಷರಿ ಗವಾಯಿಗಳಿಗೆ ನೀಡಿ, ಇಲ್ಲಿ ಸಂಗೀತ ಕಲಿಕೆಗೆ ಮೂಲ ಆದ್ಯತೆಯನ್ನು ನೀಡಿ, ಮುಖ್ಯವಾಗಿ ಅಂಧರಿಗೆ ಧೈರ್ಯ ತುಂಬುವ ಹಾಗೂ ಅವರು ಸ್ವಾವಲಂಬಿ ಜೀವನ ನಡೆಸಲು ಸಂಗೀತ ಕ್ಷೇತ್ರವನ್ನು ಆಧಾರವಾಗಿಸಿ ಆಗಾದ ಸೇವೆಗೆ ಕಾರಣರಾದವರು. ನಿರಂತರವಾಗಿ ಸಂಗೀತ ಸೇವೆಯನ್ನು ಪಂಚಾಕ್ಷರಿ ಗವಾಯಿಗಳ ನಂತರ ಡಾ.ಪಂಡಿತ ಪುಟ್ಟರಾಜ ಗವಾಯಿಗಳು ನಡೆಸುಕೊಂಡು ಬಂದು, ಇಂದು ವಿಶ್ವವಿಖ್ಯಾತವಾಗಿ ಬೆಳೆದು ಅಂಧರ ಬಾಳಿನಲ್ಲಿ ಬೆಳಕಾಗಿದ್ದಾರೆ. ಇವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರಕಬೇಕಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶಂಭುಲಿಂಗನಗೌಡ್ರ ಹಲಗೇರಿ ಮಾತನಾಡಿ, ನಾನು ಕೂಡಾ ಗದಗನಲ್ಲಿ ವಿದ್ಯಾಭ್ಯಾಸ ಮಾಡುವಾಗ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸೇವಕನಾಗಿ ಸೇವೆ ಮಾಡಿದ್ದೇನೆ. ಅದರ ಪುಣ್ಯದ ಫಲದಿಂದ ನಾನೊಬ್ಬ ಸಂಗೀತ ಆರಾಧಕನಾಗಿದ್ದೇನೆ. ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಶಿಕ್ಷಣಕ್ಕೆ ಅವಕಾಶ ನೀಡಿದಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಬಲ್ಲದು ಎಂದು ಹೇಳಿದರು. 

ವೇದಿಕೆ ಮೇಲೆ ವರದಿಗಾರಾದ ಪ್ರಮೋದ ಕುಲಕರ್ಣಿ, ಸಂತೋಷ ದೇಶಪಾಂಡೆ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರ,  ವಿಠ್ಠಲಕೃಷ್ಣ ದೇವಸ್ಥಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಪೋತೆದಾರ, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾದ ಪಂಡಿತ ಹುಸೇನದಾಸ ಕನಕಗಿರಿ, ಹಿಂದಿ ಶಿಕ್ಷಕರಾದ  ರುದ್ರಮ್ಮ ಸಿ.ಸೊಪ್ಪಿಮಠ, ವರದಿಗಾರ ಶಿವರಾಜ ನುಗಡೋಣಿ, ಹಾರ್ಮೊನಿಯಂ ವಾದಕರಾದ ರಾಮು ಕಂಪ್ಲಿ ಗಂಗಾವತಿ ಇವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ಇದೇ ಸಂದರ್ಭದಲ್ಲಿ ಬೆಂಗಳೂರು ದಾಸವಾಣಿ ಗಾಯಕರಾದ ಪಂಡಿತ ಹುಸೇನದಾಸ ಕನಕಗರಿ ಇವರಿಂದ ದಾಸವಾಣಿ, ಮಹಾಂತಯ್ಯ ಹಿರೇಮಠ ಹಿರೇಬಗನಾಳ ಭಕ್ತಿ ಗೀತೆ, ಸಂಗೀತ ಶಿಕ್ಷಕರಾದ ಯಮನೂಪ್ಪ ಹಾಗೂ ಚೆನ್ನಯ್ಯ ರಾ​‍್ಯವಣಕಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂತರಾಷ್ಟ್ರೀಯ ತಬಲಾ ವಾದಕ ಜಲೀಲ್ ಪಾಷಾ ಮುದ್ದಾಬಳ್ಳಿ ವಿಶೇಷ ತಬಲಾ ಸೊಲೊ ಕಾರ್ಯಕ್ರಮ ನಡೆಯಿತು. ಎನ್‌.ಹೆಚ್,.ಬಡಿಗೇರ್ ತಬಲಾ, ರಾಮು ಕಂಪ್ಲಿ ಹಾರ್ಮೊನಿಯಂ ಸಾಥ್ ನೀಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತ ಮತ್ತು ನಿರ್ವಹಣೆಯನ್ನು ಮಹಾಂತಯ್ಯ ಶಾಸ್ತಿ ಹಿರೇಮಠ ನೆರವೇರಿಸಿದರು.