ನವದೆಹಲಿ 02: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಚರ್ಚೆಗೆ ಒತ್ತಾಯಿಸಿ ಪಂಜಾಬ್‌ನ ರೈತರು ಈ ವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದು ಇದರ ನಡುವೆ ಭಾರತೀಯ ಕಿಸಾನ್ ಪರಿಷತ್ ನೇತೃತ್ವದ ರೈತರ ಮೊದಲ ಗುಂಪು ಸೋಮವಾರ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿದೆ, ಇನ್ನು ಪ್ರತಿಭಟನಾ ಮೆರವಣಿಗೆ ನಡೆಯುವ ಮೊದಲೇ ನೋಯ್ಡಾ – ದೆಹಲಿ ಗಡಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಭಾರತೀಯ ಕಿಸಾನ್ ಪರಿಷತ್ ಸೋಮವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು ಈ ನಡುವೆ ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪರಿಶೀಲನೆ ನಡೆಸಿ ಬಿಡುತ್ತಿರುವುದರಿಂದ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಸಲಹೆಗಳನ್ನು ನೀಡಿದ್ದಾರೆ, ಅಲ್ಲದೆ ವಾಹನಗಳ ಬದಲಿಗೆ ಮೆಟ್ರೋ ರೈಲುಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಪ್ರತಿಭಟನಾ ನಿರತ ರೈತರು ಸೋಮವಾರ ಮಧ್ಯಾಹ್ನ ನೋಯ್ಡಾದ ಮಹಾ ಮಾಯಾ ಮೇಲ್ಸೇತುವೆಯಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.