ಲೋಕದರ್ಶನ ವರದಿ
ಗೋಕಾಕ: ಚುನಾವಣೆಯಿಂದ ಹಿಂದೆ ಸರಿಯಲು ಹಣ ಪಡೆದಿದ್ದಾರೆ ಎಂಬ ಆರೋಪ ಹಿನ್ನೆಲೆ, ಬಿಜೆಪಿ ಮುಖಂಡ ಅಶೋಕ ಪೂಜೇರಿ ಅವರು ನೊಂದು ಸಾರ್ವಜನಿಕವಾಗಿ ಗಳಗಳನೇ ಕಣ್ಣೀರಿಟ್ಟರು.
ಅವರು, ಶನಿವಾರದಂದು ನಗರದ ಜ್ಞಾನಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಉಪಚುನಾವಣೆ ಹಿನ್ನೆಲೆ ಕರೇದ ಬೆಂಬಲಿಗರ ಸಭೆಯಲ್ಲಿ ಸಾರ್ವಜನಿಕವಾಗಿ ಗಳಗಳನೇ ಅತ್ತು ಬೆಂಬಲಿಗರ ಎದುರು ಎರಡು ಕೊಡ ಮೈಮೇಲೆ ನೀರು ಸುರಿದುಕೊಂಡು, ಕಣ್ಣೀರಿಟ್ಟು ಸಂಗಮನಾಥನ ಮೇಲೆ ಪ್ರಮಾಣ ಮಾಡಿದರು.
ಸಭೆ ಬಳಿಕ ನಾನು ಯಾರ ಬಳಿಯೂ ಒಂದು ರೂಪಾಯಿ ಕೂಡ ಪಡೆದಿಲ್ಲ. ಮೂರು ಚುನಾವಣೆಗಳಲ್ಲಿ 30 ಎಕರೆ ಹೊಲ ಮಾರಿ, ಕೋಟ್ಯಂತರ ಸಾಲ ಮಾಡಿಕೊಂಡಿದ್ದೇನೆ. ಚುನಾವಣೆಯಿಂದ ಹಿಂದೆ ಸರಿಯಲು ನಾನು ಯಾರ ಬಳಿಯೂ ಒಂದು ರೂಪಾಯಿ ಹಣ ಪಡೆದಿಲ್ಲ ಎಂದು ನೊಂದು ಕಣ್ಣೀರಿಟ್ಟು, ಅಶೋಕ ಪೂಜೇರಿ ದೇವರ ಮೇಲೆ ಪ್ರಮಾಣ ಮಾಡಿದರು.